ಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಜೀವ ಹಾನಿಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಜನರ ಭವಿಷ್ಯಕ್ಕೆ ಅಗತ್ಯ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಮಹತ್ತರ ಚರ್ಚೆ ನಡೆಯಬೇಕಿದ್ದ ಕೊಡಗು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಸಾಲ ಮನ್ನಾಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಂಡಿದ್ದನ್ನು ಹೊರತು ಪಡಿಸಿ ಉಳಿದಂತೆ ಕಿತ್ತಾಟಕ್ಕೆ ಸೀಮಿತವಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಭೆಯ ಆರಂಭದಲ್ಲಿ ಕೊಡಗಿನಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದ ಅನಾಹುತಗಳ ಕುರಿತು ಮಾತನಾಡಿದ ಅಧ್ಯಕ್ಷ ಹರೀಶ್ ಬಳಿಕ ಭೂಕುಸಿತದಿಂದ ಜೀವಕಳೆದುಕೊಂಡವರ ಹಾಗೂ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸುವಂತೆ ನೀಡಿದ ಕರೆಗೆ ಸಭೆ ಸಮ್ಮತಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿತು.
ನಂತರ ಮಾಮೂಲಿ ಸಭೆಗಳಂತೆ ಇತರ ವಿಷಯಗಳ ಕುರಿತು ಚರ್ಚೆ ಪಾಲನೆಯಾಗದ ಅನುಪಾಲನಾ ವರದಿ ಗೊಂದಲ ಸದಸ್ಯರುಗಳ ನಡುವೆಯೆ ಕಿತ್ತಾಟ ಇಂದಿನ ಸಭೆಯಲ್ಲಿಯೂ ಮುಂದುವರೆಯಿತು. ಪ್ರಾಕೃತಿಕ ವಿಕೋಪದ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕೊಡಗಿನ ಜನತೆಗೆ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಕಾಂಗ್ರೆಸ್‍ನ ಚಂದ್ರಕಲಾ ಹೇಳಿದರೆ, ಜಿ.ಪಂ. ಅಧ್ಯಕ್ಷರು ತಮ್ಮಿಂದಾದಷ್ಟು ಕೆಲಸವನ್ನು ಪ್ರಾಕೃತಿಕ ವಿಕೋಪದ ಸಂದರ್ಭ ಮಾಡಿದ್ದಾರೆ ಎಂದು ಬಿಜೆಪಿಯ ಭವ್ಯ ಅವರಿಂದ ಸಮರ್ಥನೆ. ಇಬ್ಬರ ನಡುವೆ ವಾಗ್ವಾದ ನಡೆದು ನಾನು ಅಧ್ಯಕ್ಷರ ಹತ್ರ ಮಾತಾಡಿದ್ರೆ ನಿಮ್ಗೇನ್ರಿ ಹೊಟ್ಟೆ ಉರಿ ಎಂದು ಚಂದ್ರಕಲಾ ಪ್ರಶ್ನಿಸಿದರೆ, ಅಜೆಂಡಾ ಮೂಲಕ ಸಭೆ ನಡೆಯಲಿ ಎಂದು ಭವ್ಯ ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ಪ್ರಥ್ಯು ಮಾತನಾಡಿ, ಮುಖ್ಯಮಂತ್ರಿಗಳು ಬಂದ ಸಂದರ್ಭ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಮುಖ್ಯಮಂತ್ರಿಗಳಿಗೆ ಅಹವಾಲು ನೀಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅದೇ ಪಕ್ಷದ ಸದಸ್ಯೆ ಚಂದ್ರಕಲಾ ಸಿಎಂ ಬರೋ ವಿಚಾರ ಮಾಧ್ಯಮಗಳಲ್ಲಿ ಬರುತಲ್ವಾ ಅದನ್ನ ನೋಡಿ ತಿಳ್ಕೊಂಡು ನೀವಾಗಿಯೆ ಬಂದು ಮನವಿ ಕೊಡಿ ಅಧಿಕಾರಿಗಳು ಕರೆಯಲ್ಲ ಅಂತ ಯಾಕ್ಹೇಳ್ತಿರ ಎಂದು ಪ್ರಶ್ನಿಸಿದರು.
ಸದಸ್ಯ ಲತೀಫ್ ಮಾತನಾಡಿ, ನಿರಾಶ್ರಿತರಿಗೆ ಪರಿಹಾರ ಸಾಮಗ್ರಿ ವಿತರಣೆಯಲ್ಲೂ ಕಾಂಗ್ರೆಸ್ - ಬಿಜೆಪಿ ಎಂದು ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭ ಕಾಂಗ್ರೆಸ್ - ಬಿಜೆಪಿ ಸದಸ್ಯರುಗಳ ನಡುವೆ ಚರ್ಚೆ - ವಿಚರ್ಚೆ ನಡೆಯುತ್ತಿದ್ದ ವೇಳೆ ಮಾತಿಗಿಳಿದ ಸದಸ್ಯೆ ಮಂಜುಳಾ ಹಾಗೂ ಯಾಲದಾಳು ಪದ್ಮಾವತಿ ಇವರುಗಳು ಪ್ರಾಕೃತಿಕ ವಿಕೋಪ ಸಂದರ್ಭ ಎಲ್ಲರೂ ರಾಜಕೀಯ ರಹಿತವಾಗಿ ಕೆಲಸ ಮಾಡಿದ್ದಾರೆ. ವಿನಾಕಾರಣ ರಾಜಕೀಯ ಮಾಡಬೇಡಿ ಎಂದರು. ಈ ವೇಳೆ ಮಂಜುಳಾ ಹಾಗೂ ಲತೀಫ್ ನಡುವೆ ವಾಗ್ವಾದ ಆರಂಭವಾಯಿತು. ಜನರಿಗೋಸ್ಕರ ನೀವೇನ್ ಮಾಡಿದ್ದೀರಾ? ನಿವೇನ್ ಮಾಡಿದ್ದೀರಾ? ಎಂದು ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಸದಸ್ಯೆ ಸರಿತಾಪೂಣಚ್ಚ ಅವರು ಮಧ್ಯ ಪ್ರವೇಶಿಸಿದಾಗ ವಾತಾವರಣ ಮತ್ತಷ್ಟು ಬಿಸಿಯೇರಿತು. ಒಂದು ಹಂತದಲ್ಲಿ ಮಂಜುಳಾ ನನ್ ಬಗ್ಗೆ ಮಾತಾಡೋಕೆ ‘ವೂ ಆರ್ ಯೂ’ ಎಂದು ಸರಿತಾರನ್ನು ಪ್ರಶ್ನಿಸಿದರು. ಮಾತಿಗೆ ಮಾತು ಬೆಳೆದು ಗದ್ದಲ ಹೆಚ್ಚಾಗುತ್ತಿದ್ದಂತೆ ಅಧ್ಯಕ್ಷ ಹರೀಶ್ ಕುರ್ಚಿಯಿಂದ ಎದ್ದು ಸಭೆ ಮುಂದೂಡುವದಾಗಿ ಹೇಳಿ ಹೊರ ನಡೆದ ಘಟನೆಯೂ ನಡೆಯಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಾಕೃತಿಕ ವಿಕೋಪದಿಂದ ಅತೀ ಹೆಚ್ಚು ಹಾನಿಗೊಳಗಾಗಿರುವ ಮಕ್ಕಂದೂರು 2ನೇ ಮೊಣ್ಣಂಗೇರಿ ಕ್ಷೇತ್ರದ ಸದಸ್ಯೆ ಯಾಲದಾಳು ಪದ್ಮಾವತಿ ಬೆಳಿಗ್ಗಿನಿಂದಲೇ ಸಮಸ್ಯೆ ಕುರಿತು ಮಾತನಾಡಲು ಪ್ರಯತ್ನಿಸಿದರಾದರೂ ಅವರಿಗೆ ಅವಕಾಶ ಸಿಗುವಾಗ ಮಧ್ಯಾಹ್ನವಾಗಿತ್ತು. ಮಾತಿಗೆ ನಿಂತ ಅವರು ನನ್ನ ಕ್ಷೇತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರಾದರೂ ಆ ಬಗ್ಗೆ ಮಧ್ಯಾಹ್ನದವರೆಗೆ ಯಾವದೇ ಚರ್ಚೆ ನಡೆಯಲಿಲ್ಲ.