ಮಡಿಕೇರಿ, ಸೆ. 17: ಗ್ರಾಮೀಣ ಜನತೆಗೆ ಸರಕಾರವು ಉಚಿತವಾಗಿ ವಿತರಿಸಲು ಒದಗಿಸಿರುವ ಆಹಾರದ ಕಿಟ್‍ಗಳೊಂದಿಗೆ ಸೀಮೆಎಣ್ಣೆಯನ್ನು ಸಕಾಲದಲ್ಲಿ ತಲಪಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ತಾಕೀತು ಮಾಡಿದ್ದಾರೆ. ಇಂದು ಮಕ್ಕಂದೂರು ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿದ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಸೆಳೆದರು.
ಆಹಾರ ಇಲಾಖೆಯ ಅಧಿಕಾರಿಗಳು ಇನ್ನು ಕೂಡ ಆಹಾರ ಕಿಟ್‍ಗಳ ಸಹಿತ ಸೀಮೆಎಣ್ಣೆಯನ್ನು ಸಮರ್ಪಕವಾಗಿ ಗ್ರಾಮಸ್ಥರಿಗೆ ತಲಪಿಸಿಲ್ಲ ಎಂಬ ದೂರುಗಳ ಸಂಬಂಧ ಸುನಿಲ್ ಸುಬ್ರಮಣಿ ಗ್ರಾ.ಪಂ. ಭೇಟಿ ಕೈಗೊಂಡಿದ್ದರು. ಈ ವೇಳೆ ಮುಟ್ಲು, ಹಮ್ಮಿಯಾಲ ಗ್ರಾಮಗಳಿಗೆ ನೀಡಬೇಕಿರುವ ಸೀಮೆಎಣ್ಣೆಯನ್ನು ಮಕ್ಕಂದೂರು ಗ್ರಾ.ಪಂ. ವಶದಲ್ಲಿ ಇರಿಸಿರುವದು ಬೆಳಕಿಗೆ ಬಂತು.
ಅಲ್ಲದೆ, ಈ ಗ್ರಾ.ಪಂ. ವ್ಯಾಪ್ತಿಯ ಉದಯಗಿರಿ, ಹೆಮ್ಮೆತ್ತಾಳು, ಮೇಘತ್ತಾಳು ವ್ಯಾಪ್ತಿಯ ಅನೇಕರು ಗ್ರಾಮ ತೊರೆದಿದ್ದರೆ, ಕೆಲವರು ಎಪಿಎಲ್ ಕಾರ್ಡ್‍ಗಳನ್ನು ಬಿಪಿಎಲ್‍ಗೆ ಮಾರ್ಪಾಡುಗೊಳಿಸಲು ಬೇಡಿಕೆ ಸಲ್ಲಿಸಿರುವ ಹಿನ್ನೆಲೆ, ಸೀಮೆಎಣ್ಣೆ ಪೂರೈಕೆ ಸಾಧ್ಯವಾಗಿಲ್ಲವೆಂಬ ಉತ್ತರ ಅಧಿಕಾರಿಯಿಂದ ಬಂತು.
ಅನಂತರ ಗಾಳಿಬೀಡು ಗ್ರಾ.ಪಂ. ಮೂಲಕ ವಿತರಿಸುವ ಸೀಮೆಎಣ್ಣೆಯಲ್ಲಿ ವ್ಯತ್ಯಾಸದ ಆರೋಪ ಮೇರೆಗೆ, ಮೇಲ್ಮನೆ ಸದಸ್ಯರು ಅಲ್ಲಿನ ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಹಾಗೂ ಅಧಿಕಾರಿ ಶಶಿಕಿರಣ್‍ರಿಂದ ಮಾಹಿತಿ ಪಡೆದರು. ಸೀಮೆಎಣ್ಣೆಯನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲಾ 5 ಲೀಟರ್ ಪೂರೈಸಲು ಕ್ರಮಕ್ಕೆ ಸೂಚಿಸಿದರು.
(ಮೊದಲ ಪುಟದಿಂದ) ಮನೆಗಳನ್ನು ಕಳೆದುಕೊಂಡವರಿಗೆ, ಭಾಗಶಃ ಹಾನಿಯಾದವರಿಗೆ ಮತ್ತು ಸಂಕಷ್ಟಕ್ಕೆ ಸಿಲುಕಿರುವವರಿಗೆ ಗ್ರಾ.ಪಂ.ನಿಂದ ಸರಕಾರದ ನೆರವನ್ನು ಮಾನವೀಯ ನೆಲೆಯಲ್ಲಿ ಕಲ್ಪಿಸಬೇಕೆಂದು ತಿಳಿ ಹೇಳಿದರು. ಗಾಳಿಬೀಡು ಗ್ರಾ.ಪಂ. ಪ್ರತಿನಿಧಿಗಳೊಂದಿಗೆ ಇತರ ಪ್ರಮುಖರು, ಗ್ರಾಮಸ್ಥರು ಈ ವೇಳೆ ಹಾಜರಿದ್ದು, ತಮ್ಮ ಅಹವಾಲುಗಳನ್ನು ವ್ಯಕ್ತಪಡಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ, ಸದಸ್ಯ ಕೆ.ಎಸ್. ರಮೇಶ್ ಹಾಜರಿದ್ದರು.