ಗೋಣಿಕೊಪ್ಪ ವರದಿ, ಸೆ. 17: ಕೊಡವ ದೀನಬಂಧು ಟ್ರಸ್ಟ್ ವತಿಯಿಂದ ಇಲ್ಲಿನ ಕಾವೇರಿ ಪದವಿ, ಪದವಿಪೂರ್ವ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ಕೊಡವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸಲಾಯಿತು.

ಸುಮಾರು 65 ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡರು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಕಟ್ಟೆರ ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ವಿದ್ಯಾಭ್ಯಾಸಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು. ಟ್ರಸ್ಟ್‍ನಿಂದ ಸಹಾಯ ಪಡೆದುಕೊಂಡವರು ಓದಿ ಒಳ್ಳೆಯ ಕೆಲಸ ಪಡೆದುಕೊಂಡ ನಂತರ ಟ್ರಸ್ಟ್‍ಗೆ ತಮ್ಮ ಕೈಲಾದ ಸಹಾಯ ಮಾಡಿದರೆ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಟ್ರಸ್ಟ್ ಕಾರ್ಯದರ್ಶಿ ಪಟ್ಟಡ ಜಯಕುಮಾರ್, ಪ್ರಮುಖರುಗಳಾದ ವಿಂಗ್ ಕಮಾಂಡರ್ ಮಾದಪ್ಪ, ಚಮ್ಮಂಡ ಸೋಮಯ್ಯ, ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಇಟ್ಟೀರ ಬಿದ್ದಪ್ಪ, ಕಾರ್ಯ ನಿರ್ವಹಣಾಧಿಕಾರಿ ಎಂ.ಕೆ. ಮೊಣ್ಣಪ್ಪ, ಪದವಿ ಕಾಲೇಜು ಪ್ರಾಂಶುಪಾಲೆ ಪ್ರೊ. ಉಷಾಲತಾ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಉಪಸ್ಥಿತರಿದ್ದರು.