ಮಡಿಕೇರಿ, ಸೆ. 17: ಪ್ರಾಕೃತಿಕ ವಿಕೋಪದ ನಡುವೆ ಎದುರಾಗಿರುವ ಅನಾಹುತಗಳಿಂದಾಗಿ, ಈ ಬಾರಿಯ ಮಡಿಕೇರಿ ದಸರಾ ಆಚರಣೆಗೆ ಜನತೆಯಿಂದ ಹಣ ಸಂಗ್ರಹಿಸದೆ, ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸುವ ಮೂಲಕ, ಸರಕಾರ ಕಲ್ಪಿಸುವ ಹಣಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಲಾಯಿತು. ಈ ಸಂಬಂಧ ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳನ್ನೊಳಗೊಂಡ ಸಭೆಯಲ್ಲಿ ಇಂದು ತೀರ್ಮಾನ ಕೈಗೊಳ್ಳಲಾಯಿತು.ರಾಜ್ಯ ಸರಕಾರದಿಂದ ರೂ. 2 ಕೋಟಿ ಅನುದಾನ ನೀಡುವಂತೆ ತಾ. 19 ರಂದು (ನಾಳೆ) ಮುಖ್ಯಮಂತ್ರಿ ಬಳಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಸಹಿತ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ನೇತೃತ್ವದಲ್ಲಿ ನಿಯೋಗ ತೆರಳಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಇಂದಿನ ಪರಿಸ್ಥಿತಿಯಲ್ಲಿ ದಸರಾ ಆಚರಣೆ ಸಂಬಂಧ ಚರ್ಚೆ ನಡೆಯುವದರೊಂದಿಗೆ, ಸಂಪ್ರದಾಯ ಆಚರಣೆಗಳನ್ನು ಮುಂದುವರಿಸುವ ಮುಖಾಂತರ, ರಾಜ್ಯ ಸರಕಾರದ ಅನುದಾನಕ್ಕೆ ತಕ್ಕಂತೆ ಕಾರ್ಯಕ್ರಮ ನಡೆಸಲು ಅಭಿಪ್ರಾಯಗಳು ಕೇಳಿ ಬಂದವು. ಈಗಿನ ಪರಿಸ್ಥಿತಿಯಲ್ಲಿ ದಸರಾ ಆಚರಣೆಯೊಂದಿಗೆ ಸರಕಾರದ ಅನುದಾನ ಕೇಳಲು ಕೂಡ ತನ್ನ ಮನಸ್ಸು ಒಪ್ಪುತ್ತಿಲ್ಲವೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೋವಿನ ನುಡಿಯಾಡಿದರು. ಬಹುತೇಕ ಕೊಡಗಿನ ಜನತೆ ಪರಿಸ್ಥಿತಿಯ ಹೊಡೆತದಿಂದ ನಲುಗಿ ಹೋಗಿದ್ದು, ರಾಜ್ಯ ಸರಕಾರ ಕೂಡ ಗೊಂದಲದಲ್ಲಿ ಇದೆಯೆಂದು ನೆನಪಿಸಿದರು.

ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಪರಿಸ್ಥಿತಿಯನ್ನು ಮೆಲುಕು ಹಾಕುತ್ತಾ, ವ್ಯಾಪಾರೋದ್ಯಮದೊಂದಿಗೆ ಪ್ರವಾಸೋದ್ಯಮ ಕೂಡ ಕುಂಠಿತಗೊಂಡಿರುವ ಸನ್ನಿವೇಶದಲ್ಲಿ ಸರಕಾರ ನೀಡುವ ಅನುದಾನದಿಂದ ಕಾರ್ಯಕ್ರಮ ಆಯೋಜಿಸುವಂತಾಗಿದ್ದು, ಆ ಮುಖಾಂತರ ಜಿಲ್ಲೆಯ ಜನತೆಯು ಚೇತರಿಸಿಕೊಳ್ಳಲು ಸಾಧ್ಯವಾದೀತು ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಜನತೆಯ ಭಾವನೆಗಳಿಗೆ ನೋವಾಗದಂತೆ, ಯಾರೊಬ್ಬರೂ ಮೋಜು ಮಸ್ತಿಯಲ್ಲಿ ತೊಡಗದೆ ಸಂಪ್ರದಾಯ ಆಚರಣೆಗಳನ್ನು ದೈವಿಕ ನೆಲೆಯಲ್ಲಿ ಆಚರಿಸಬೇಕೆಂದು ತಿಳಿ ಹೇಳಿದರು. ದೇಶದ ಪ್ರಧಾನಿಯೇ ನವರಾತ್ರಿಯನ್ನು ವ್ರತಾಚರಣೆ ಮೂಲಕ ಆಚರಿಸುವಾಗ, ನಾವೇಕೆ ಮೋಜಿನಲ್ಲಿ ತೊಡಗಬೇಕೆಂದು ಮಾರ್ಮಿಕ ಪ್ರಶ್ನೆ ಮುಂದಿಟ್ಟರು.

ಜನಪ್ರತಿನಿಧಿಗಳು, ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿ, ಉಪಸಮಿತಿ ಪ್ರಮುಖರ ಅಭಿಪ್ರಾಯ ಪಡೆದು, ತಾ. 19 ರಂದು ನಿಯೋಗ ತೆರಳಲು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಆ ಬಳಿಕವಷ್ಟೇ ಮುಂದಿನ ತೀರ್ಮಾನದ ಇಂಗಿತ ವ್ಯಕ್ತವಾಯಿತು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಚುಮ್ಮಿ ದೇವಯ್ಯ ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್, ದಸರಾ ಸಮಿತಿಯ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.