ಮಡಿಕೇರಿ, ಸೆ. 17: ಜಿಲ್ಲೆಯಲ್ಲಿ ಜಲಪ್ರಳಯದಿಂದಾಗಿ ಮನೆ ಕಳೆದುಕೊಂಡವರ ನೆರವಿಗೆ ಗುಡ್ಡೆಹೊಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಅಬ್ದುಲ್ ಲತೀಫ್ ತಮ್ಮ ತೋಟದಲ್ಲಿನ ಒಂದು ಎಕರೆ ಜಾಗವನ್ನು ನೀಡಿ ಹೃದಯವಂತಿಕೆÉ ಮೆರೆದಿದ್ದಾರೆ. ಸುಂಟಿಕೊಪ್ಪದ ತಮ್ಮ ಕಾಫಿ ತೋಟದಲ್ಲಿ ಒಂದು ಎಕರೆ ಜಾಗವನ್ನು ಇಂದು ರಾಜ್ಯ ವಸತಿ ಸಚಿವ ಯು.ಟಿ. ಖಾದರ್ ಅವರಿಗೆ ಹಸ್ತಾಂತರಿಸಿ ಜಾತಿ, ಮತ, ಭೇದವಿಲ್ಲದೆ ಅಗತ್ಯವುಳ್ಳವರಿಗೆ ನೆರವು ಕಲ್ಪಿಸಲು ಈ ಜಾಗವನ್ನು ಬಳಸುವಂತೆ ವಿನಂತಿಸಿದರು.

ಎಸ್.ವೈ.ಎಸ್. ಮತ್ತು ಎಸ್.ಎಸ್.ಎಫ್. ಸಂಸ್ಥೆಗಳು ಫಲಾನುಭವಿಗಳನ್ನು ಗುರುತಿಸಿ ಉಚಿತವಾಗಿ ಇಲ್ಲಿ ಮನೆಗಳನ್ನು ನಿರ್ಮಿಸಿಕೊಡುವದಾಗಿ ತಿಳಿಸಿದರು. ಸುಲ್ತಾನಲ್ ಉಲೆಮಾ ಎ.ಬಿ. ಅಬೂಬಕರ್ ಮುಸ್ಲಿಯಾರ್ ಅವರ ಮೂಲಕ ನಡೆದ ಹಸ್ತಾಂತರ ಸಂದರ್ಭ ಮಾಜಿ ಸಚಿವ ರೋಶನ್ ಬೇಗ್, ಎಂ.ಎಲ್.ಸಿ. ಸಿ.ಎಂ. ಇಬ್ರಾಹಿಂ ಹಾಗೂ ಇತರ ಪ್ರಮುಖರು ಹಾಜರಿದ್ದರು.