ಜಲಸ್ಫೋಟದಿಂದಾಗಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲಿ ಇವರದ್ದೂ ಒಂದು ಕಥೆ... ಮೇಘತ್ತಾಳು ಗ್ರಾಮದ ತಂತಿಪಾಲದ ತಂಬುಕುತ್ತಿರ ಕೌಶಿಕ್ ಪೂವಣ್ಣರ ಕಥೆ.
41 ವರುಷ ಪ್ರಾಯದ ಈತ ಅಲ್ಲಿ ಇಲ್ಲಿ ಖಾಸಗಿಯವರೊಂದಿಗೆ ದುಡಿದು ಬದುಕು ಕಟ್ಟಿಕೊಂಡಿದ್ದ. ಕಳೆದ 15 ವರ್ಷಗಳಿಂದ ಆ ದುಡಿಮೆಯಿಂದ ತಂತಿಪಾಲದ ತನ್ನ ಜಮೀನಿನಲ್ಲಿ ಸುಂದರವಾದ ಕಣ್ಣು ಕುಕ್ಕುವಂತೆ ಕೃಷಿ ಮಾಡಿದ್ದ.
ನದಿತಟದ ಗದ್ದೆ ಭೂಮಿಯಲ್ಲಿ ಕಾಫಿ, ಅಡಿಕೆ, ಒಳ್ಳೆ ಮೆಣಸು, ಬಾಳೆಗಿಡಗಳು ಸೇರಿದಂತೆ ಹತ್ತು ಹಲವಾರು ಹಣ್ಣು ಹಂಪಲು ಗಿಡಗಳನ್ನು ಬೆಳೆಸಿ ತನ್ನ ಸ್ವಂತ ಸಿರಿಯನ್ನು ಕಂಡುಕೊಂಡು ಬೆವರು ಹರಿಸಿ ಉಳಿಸಿದ ಹಣದಲ್ಲಿ ಸ್ಪ್ರಿಂಕ್ಲರ್ ಸೆಟ್ ಒಂದನ್ನು ಕೊಂಡುಕೊಂಡು ಸ್ವ ಬಳಕೆಗೆ ಹಾಗೂ ಗ್ರಾಮಸ್ಥರಲ್ಲಿ ಬೇಡಿಕೆ ಇದ್ದಕಡೆ ತೋಟಗಳಿಗೆ ನೀರು ಹಾಯಿಸುವ ಕಾಯಕ ಮಾಡುತ್ತಾ ಮತ್ತಷ್ಟು ಕಾಸನ್ನು ಶೇಖರಿಸಿಕೊಂಡ.
ಹಾಗೇ ಕೂಡಿಟ್ಟ ಹಣದಿಂದ ಕಳೆದ ಆರು ತಿಂಗಳ ಹಿಂದೆ 15-20 ಲಕ್ಷ ಅಂದಾಜಿನ ಮನೆ ಕಟ್ಟಿಕೊಳ್ಳಲು ಉತ್ಸಾಹದಿಂದ ಶ್ರಮಿಸುತ್ತಿದ್ದ. ಅಡಿಪಾಯದಿಂದ ಇಟ್ಟಿಗೆ ಇಟ್ಟಿಗೆ ಪೇರಿಸಿ ಎದ್ದ ತನ್ನ ಕನಸಿನ ಗೂಡು ಮಾಡುಕಟ್ಟಿಕೊಳ್ಳುವ ಹಂತಕ್ಕೆ ಬಂದು ತಲಪಿತ್ತು.
ಆ ದಿನ ಆಗಸ್ಟ್ 15, ಜಲಸ್ಫೋಟ. ಕೂದಲೆಳೆಯ ಅಂತರದಲ್ಲಿ ಒಂದು ಹತ್ತು ಕಡೆಗಳಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಕತ್ತಲಲ್ಲಿ ಕಾಡಿನ ಅದ್ಯಾವದ್ಯಾವದೋ ದಾರಿಗಳಲ್ಲದ ದಾರಿಗಳಲ್ಲಿ ಹೆಜ್ಜೆಯನ್ನು ಊರಿಕೊಂಡು ದಾರಿಯಾಗಿಸಿಕೊಂಡು ಮಡಿಕೇರಿ ತಲಪಿದ ನಂತರ ಸಂಬಂಧಿಕರ ಮನೆ ಸೇರಿಕೊಂಡು ನಿದ್ದೆ ಬಾರದ ಕಣ್ಣಿನಲ್ಲಿ ನಾಳೆಗಳ ಚಿಂತೆ. ಹಾಗೂ ಹೀಗೂ ಬೆಳಕರಿದ ನಂತರ ಮರಳಿ ಊರನ್ನು ನೋಡುವ ತವಕದಿಂದ ಬಂದು ನೋಡಿದರೆ ಹಳೆಮನೆಯ ಅಡಿಪಾಯದ ಕಲ್ಲುಗಳು ಮಾತ್ರ ಕಾಣಸಿಕ್ಕಿದವು.
ಪ್ರಪಂಚದ 9ನೇ ಅದ್ಭುತವೆಂಬಂತೆ ನಾಳೆಗಳು ನಿನಗೂ ಇದೆ ಎಂಬ ಸೂಕ್ಷ್ಮಾರ್ಥತೆಯಂತೆ ಮನೆಯ ವಿದ್ಯುತ್ ದೀಪವೊಂದು ಮನೆಯಂಗಳದ ಮರದ ಮೇಲೆ ನೇತಾಡುತ್ತಾ ಬೆಳಗುತ್ತಿತ್ತು. ದುಸ್ಥಿತಿಯಲ್ಲೂ ಅಣಕಿಸುವಂತೆ ನಾಳೆಗಳು ನಿನಗಿವೆಯೆಂದು ಆತ್ಮಸ್ಥೈರ್ಯವನ್ನು ತುಂಬಿಸುವಂತೆ ನಿರ್ಮಾಣ ಹಂತದಲ್ಲಿರುವ ಮನೆಯ ತುಂಬಾ ಮರಳಿನ ರಾಶಿ. ಸುಂದರ ತೋಟವಿದ್ದ ತುಂಬೆಲ್ಲಾ ಸ್ಫೋಟ ತಂದಿಟ್ಟ ಮರಳು ಹಾಗೂ ಮರಗಳ ರಾಶಿ.
ನಾಳೆಯ ಬದುಕಿಗೆ ಮರಳು, ಮರಗಳನ್ನು ಮಾರಿಯಾದರೂ ಆರ್ಥಿಕ ಸುಧಾರಣೆ ಕಂಡುಕೊಳ್ಳಬಹುದೇನೋ ಎಂಬ ಆಶಾಕಿರಣವಾದರೂ ಸಾಧ್ಯವಾಗದ ಕೆಲಸ.
ಯಾರದೋ ತೋಟದ ಮರಗಳು ಮತ್ಯಾರದೋ ಗದ್ದೆಯಲ್ಲಿ ಬಂದು ಬಿದ್ದಿರುವದು ಸಾಮಾನ್ಯ. ತೋಟಕ್ಕೆ ನೀರು ಹಾಯಿಸಲು ಬಳಸುತ್ತಿದ್ದ ಎರಡು ಸ್ಪ್ರಿಂಕ್ಲರ್ ಮಿಷನ್‍ಗಳು ಜಲಸ್ಫೋಟದ ನರ್ತನಕ್ಕೆ ನಾಪತ್ತೆಯಾಗಿವೆ.
ಎಲ್ಲವನ್ನೂ ಕಳೆದುಕೊಂಡ ಕೌಶಿ ಮತ್ತು ಸಂಸಾರ ಮಡಿಕೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಮಾಡುತ್ತಿದೆ. ಮಧ್ಯೆ ಮಧ್ಯೆ ಮಣ್ಣು ಪಾಲಾದ ತೋಟ, ಮನೆಯ ಕುರುಹುಗಳನ್ನು ನೋಡಲು ಹೊಗಿ ಬರುತ್ತಿರುತ್ತಾನೆ.
ಒಮ್ಮೆ ನೋಡಿ ಬಂದರೆ 2-3 ದಿನ ನಿದ್ದೆಯೇ ಬರುವದಿಲ್ಲ ಎಂದು ಆತ ಹೇಳುವಾಗ ಆತನ ಕಣ್ಣಲ್ಲಿ ನೀರು ಜಿನುಗಿತ್ತು. ಆ ಕ್ಷಣದಲ್ಲಿ ನನ್ನ ಕಣ್ಣಾಲಿಗಳು ತುಂಬಿಕೊಂಡರೂ ಆತನಿಗೆ ಅರಿವಿಗೆ ಬಾರದಂತೆ ಒರೆಸಿಕೊಂಡು ಬಿಟ್ಟೆ. ಅದ್ಯಾರೋ ಪರಿವೀಕ್ಷಣೆಗೆಂದು ಬಂದ ಅಧಿಕಾರಿ ವರ್ಗ ಅಲ್ಲಿ ಮನೆ ಇತ್ತೆಂಬದಕ್ಕೆ ಯಾವ ಪುರಾವೆಯೂ ಇಲ್ಲ. ಹೇಗೆ ಮನೆ ಇತ್ತು ಎಂಬದಾಗಿ ದಾಖಲಿಸಲು ಸಾಧ್ಯ...?
ಅದೇನೋ ಪುಣ್ಯಕ್ಕೆ ಆ ಮನೆಯ ಕರೆಂಟ್ ಬಿಲ್, ಕಂದಾಯ ರಶೀತಿಗಳು ಮಣ್ಣಲ್ಲಿ ಕೊಚ್ಚಿಹೋದ ಮನೆಯ ದಾಖಲಾತಿಯಾಗಿ ಉಳಿದುಕೊಂಡಿವೆ.
ಕೌಶಿಕ್‍ನ ಕಣ್ಣೀರು ಒರೆಸಲು ಸದ್ಯಕ್ಕೆ ಕೊಡಗು ರೈತ ಸಂಘ ನಿಂತಿದೆ. ತಂದೆ, ತಾಯಿ, ಮಡದಿ, ಮಕ್ಕಳಿರುವ ಈತನಿಗೆ ಕಳೆದುಕೊಂಡದ್ದನ್ನು ಪೂರ್ಣ ಹಿಂತಿರುಗಿಸಿಕೊಳ್ಳಲು ಸಾಧ್ಯವಾಗದೆ ಹೋದರೂ ಕೂಡ ಆತನ ನಾಳೆಗಳಿಗಾಗಿ ನಾವು- ನೀವು ಕೈ ಹಿಡಿದು ನಡೆಸುವ ಪ್ರಯತ್ನ ಮಾಡಿದರೆ ಆತನ ಕೊಚ್ಚಿಹೋದ ಮನೆಯ ವಿದ್ಯುತ್ ದೀಪ ಬೆಳಗುತ್ತಿದ್ದಂತೆ ಆತನ ಬಾಳು ಬೆಳಗಬಹುದು. -ಅಲ್ಲಾರಂಡ ವಿಠಲ್ ನಂಜಪ್ಪ.