ಸೋಮವಾರಪೇಟೆ, ಸೆ.17: ಮನೆ ನುಗ್ಗಿ ಕಳ್ಳತನ ನಡೆಸಿದ ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ದಿನ ಹಗಲು 11.30ರ ಸುಮಾರಿಗೆ ಕೆಂಚಮ್ಮನಬಾಣೆ ನಿವಾಸಿ ರಾಜೇಂದ್ರ ಎಂಬವರ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳ, ಮನೆಯೊಳಗಿದ್ದ ಗಾದ್ರೇಜ್ ಬೀರುವನ್ನು ಒಡೆದು 10 ಗ್ರಾಂ ಚಿನ್ನದ ಸರ ಮತ್ತು 4 ಸಾವಿರ ಹಣವನ್ನು ಕಳ್ಳತನವೆಸಗಿದ್ದ.

ಈ ಬಗ್ಗೆ ರಾಜೇಂದ್ರ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿಗಳಾದ ಮಹದೇವಸ್ವಾಮಿ, ಅನಂತ್, ಜಗದೀಶ್, ಮಧು, ರಮೇಶ್ ಅವರುಗಳು ಕಾರ್ಯಾಚರಣೆ ನಡೆಸಿ ಅದೇ ಗ್ರಾಮದ ಪೆರಿಯಣ್ಣ ಎಂಬವರ ಪುತ್ರ ಅಣ್ಣಪ್ಪ ಎಂಬಾತನನ್ನು ಇಂದು ವಶಕ್ಕೆ ಪಡೆದಿದ್ದಾರೆ.

ಈತ ಕಳ್ಳತನ ಮಾಡಿದ್ದ 4 ಸಾವಿರ ಹಣದಲ್ಲಿ 3750 ನಗದು ಹಾಗೂ 10 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ 13 ವರ್ಷಗಳ ಹಿಂದೆಯೂ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿ ಬಂಧಿತನಾಗಿದ್ದ ಎಂದು ವೃತ್ತ ನಿರೀಕ್ಷಕ ನಂಜುಂಡೇಗೌಡ ತಿಳಿಸಿದ್ದಾರೆ.