ಸೋಮವಾರಪೇಟೆ,ಸೆ.16: ಸಂತ್ರಸ್ತರಿಗೆ ನೀಡಿದ ಹಣವನ್ನು ವಾಪಸ್ ಪಡೆದುಕೊಂಡು ಜಾತಿನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರ ವಿರುದ್ಧ ಸುಳ್ಳು ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಬೇಕೆಂದು ಕರವೇ ತಾಲೂಕು ಸಾಹಿತ್ಯ ಘಟಕದ ಒತ್ತಾಯಿಸಿದೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಕರವೇ ಏಳಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ತಾಲೂಕು ಅಧ್ಯಕ್ಷರಾದ ದೀಪಕ್‍ರವರ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯದ ಸುಳ್ಳು ದೂರು ಕೊಡಿಸಿರುವದು ಖಂಡನೀಯ ಎಂದರು.
ಕಳೆದ ಎಂಟು ವರ್ಷಗಳಿಂದ ದೀಪಕ್‍ರವರ ನೇತೃತ್ವದಲ್ಲಿ ಹಲವು ಸಮಾವೇಶಗಳು, ಶಿಕ್ಷಕರ ದಿನಾಚರಣೆ, ಜಿಲ್ಲಾ ಮಟ್ಟದ ಸಾಹಿತ್ಯ ಕಾರ್ಯಕ್ರಮ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು, ಇದರೊಂದಿಗೆ ಅನೇಕ ಸಮಾಜಮುಖಿ ಕೆಲಸಗಳು ಮತ್ತು ಸೇವಾ ಕಾರ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡಿದೆ. ಇದನ್ನು ಸಹಿಸದ ಕೆಲ ಸಮಾಜಘಾತುಕ ಶಕ್ತಿಗಳು ಸುಳ್ಳು ದೂರು ಕೊಡಿಸುವ ಮೂಲಕ ದೀಪಕ್ ಅವರನ್ನು ಅಪರಾಧಿಯನ್ನಾಗಿಸಲು ಸಂಚು ರೂಪಿಸಿವೆ ಎಂದರು.
ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ನಿರಾಶ್ರಿತರಿಗೆ ಹಣ ನೀಡಿದ ಸಂದರ್ಭ ದೀಪಕ್ ಅವರು ನಿಜವಾದ ಸಂತ್ರಸ್ತರಾಗಿದ್ದ ಮಾದಾ ಪುರದ ಡ್ಯಾನಿಯಲ್ ಅವರಿಗೆ ರೂ. 50 ಸಾವಿರ ಕೊಡಿಸಿದ್ದಾರೆ. ತಾಲೂಕು ಅಧ್ಯಕ್ಷೆ ರೂಪಾ ಸುರೇಶ್ ಅವರು ಮಸಗೋಡಿನ ಶೈಲಾ ಸುಧೀರ್ ಅವರನ್ನು ಗುರುತಿಸಿದ್ದು, ಹಣ ನೀಡಿದ ನಂತರ ಹಣ ಕಾಣೆಯಾಗಿದೆ ಎಂದು ಸಂತ್ರಸ್ಥರು ತಿಳಿಸಿದ್ದು, ಎಲ್ಲರೂ ಹುಡುಕಾಟ ನಡೆಸಿದ್ದಾರೆ. ಅಂದು 8.30ಕ್ಕೆ ದೀಪಕ್ ಅವರು ಮನೆಗೆ ತೆರಳಿದ್ದಾರೆ ಎಂದು ವಿವರ ನೀಡಿದರು.
ತಾ. 5ರಂದು ಶೈಲಾ ಸುಧೀರ್ ನೀಡಿದ ದೂರಿನಲ್ಲಿ ದೀಪಕ್ ಅವರ ಹೆಸರಿರಲಿಲ್ಲ. ಆದರೆ ತಾ. 8ರಂದು ದಾಖಲಾದ ಮೊಕದ್ದಮೆಯಲ್ಲಿ ಇವರ ಹೆಸರು ಸೇರಿಸಲಾಗಿದೆ. ಸಾಮಾಜಿಕ ಹಾಗೂ ವೈಯುಕ್ತಿಕ ಏಳಿಗೆ ಸಹಿಸದ ಕೆಲ ಸಮಾಜಘಾತುಕ ಶಕ್ತಿಗಳು ಪ್ರಕರಣಕ್ಕೆ ಸಂಬಂಧವಿಲ್ಲದ ದೀಪಕ್ ಅವರ ಹೆಸರನ್ನು ತಂದು ತಮ್ಮ ಬೇಳೆಬೇಯಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ರಕ್ಷಣಾ ವೇದಿಕೆಯ ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂಚಾಲಕ ಆದರ್ಶ್ ಉಪಸ್ಥಿತರಿದ್ದರು.