ಮಡಿಕೇರಿ, ಸೆ. 15: ಇಂದಿನ ಮಕ್ಕಳಿಗೆ ಗುರುವಿನಂತೆ ಗೂಗಲ್ ಇದ್ದು, ಕಂಪ್ಯೂಟರ್ ನೀಡುವ ಮಾಹಿತಿಯೇ ಸರ್ವಸ್ವದಂತಾಗಿದೆ. ಹೀಗಾಗಿ ಶೈಕ್ಷಣಿಕ ಗುಣಮಟ್ಟ ಶಿಕ್ಷಕರ ಬೋಧನೆಗಿಂತ ಹೆಚ್ಚಾಗಿ ತಾಂತ್ರಿಕತೆಯನ್ನೇ ಅವಲಂಭಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಲೇಖಕಿಯರ ಬಳಗದ ಅಧ್ಯಕ್ಷೆ, ಹಿರಿಯ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ವಿಷಾಧಿಸಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನಿಂದ ಆಯೋಜಿತ ಶಿಕ್ಷಕರ ದಿನಾಚರಣೆಯಲ್ಲಿ 9 ಶಿಕ್ಷಕರಿಗೆ ನ್ಯಾಷನ್ ಬಿಲ್ಡರ್ಸ್ ಪ್ರಶಸ್ತಿ ವಿತರಿಸಿ ಮಾತನಾಡಿದ ಕಸ್ತೂರಿ ಗೋವಿಂದಮ್ಮಯ್ಯ, ವೈಜ್ಞಾನಿಕತೆಯ ಭರಾಟೆಯ ಆಧುನಿಕ ಚಿಂತನೆಯ ದಿನಗಳಲ್ಲಿ ಜೀವಿಸುತ್ತಿರುವ ಮಕ್ಕಳನ್ನು ನವನಾಗರಿಕತೆ, ನವತಂತ್ರಜ್ಞಾನಗಳು ಹೊಸದ್ದೊಂದು ಲೋಕಕ್ಕೆ ಕೊಂಡೊಯ್ಯುತ್ತಿದೆ. ಮಕ್ಕಳ ಹಿತಚಿಂತನೆಯ ಬಗ್ಗೆ ಯಾರಿಗೂ ಯೋಚಿಸಲೂ ಸಮಯವಿಲ್ಲದಂತಾಗಿದೆ. ಮೊದಲೆಲ್ಲಾ ಜೀವಿಸುವದಕ್ಕಾಗಿ ದುಡ್ಡು ಬೇಕಿತ್ತು. ಈಗಿನ ದಿನಗಳಲ್ಲಿ ದುಡ್ಡಿಗಾಗಿಯೇ ಜೀವನ ಎಂಬಂತಾಗಿದೆ ಎಂದೂ ವಿಶ್ಲೇಷಿಸಿದರು. ಮಕ್ಕಳ ಪೆÇೀಷಕರ ಅಂತಸ್ತನ್ನು ಅವಲಂಭಿಸಿ ಮಕ್ಕಳನ್ನು ಗುರುತಿಸುವ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾಭ್ಯಾಸ ಪದ್ಧತಿಯನ್ನೂ ಕಸ್ತೂರಿ ಗೋವಿಂದಮ್ಮಯ್ಯ ಟೀಕಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಿವೃತ್ತ ಶಿಕ್ಷಕ ಎಂ.ಕೆ. ರಮೇಶ್, ಜಯಲಕ್ಷ್ಮೀ ರಮೇಶ್, ಮಡಿಕೇರಿ ಸಂತ ಜೊಸೇಫರ ಕಾನ್ವೆಂಟ್ ಉಪನ್ಯಾಸಕಿ ಕೆ. ಜಯಲಕ್ಷ್ಮೀ, ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೇಜರ್ ಬಿ. ರಾಘವ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ದಾಮೋದರ್ ಗೌಡ, ನಾಪೆÇೀಕ್ಲು ಶ್ರೀರಾಮಟ್ರಸ್ಟ್‍ನ ಶಿಕ್ಷಕಿ ಟಿ.ಆರ್. ಸುಬ್ಬಮ್ಮ, ಕಡಗದಾಳು ಶಾಲಾ ಶಿಕ್ಷಕಿ ಹೆಚ್.ಎನ್. ಭಾರತಿ, ನಾಪೆÇೀಕ್ಲು ಶಾಲಾ ಶಿಕ್ಷಕಿ ಕೆ.ಬಿ. ಉಷಾರಾಣಿ ಅವರಿಗೆ ನ್ಯಾಷನ್ ಬಿಲ್ಡರ್ರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ತಾವು ಆರೋಹಣ ಎಂಬ ಚಾರಣ ತಂಡದೊಂದಿಗೆ ಚಾರಣ ಕೈಗೊಂಡಿದ್ದ ಹಲವಾರು ಬೆಟ್ಟಗುಡ್ಡಗಳು ಭೂಕುಸಿತಕ್ಕೊಳಗಾಗಿ ಸೌಂದರ್ಯವನ್ನೇ ಕಳೆದುಕೊಂಡಿದ್ದು, ಪ್ರಕೃತ್ತಿ ಮುನಿದರೆ ಏನಾದೀತು ಎಂಬದಕ್ಕೆ ಇತ್ತೀಚಿನ ದುರಂತ ನಿದರ್ಶನ ಎಂದರು. ನಾನು ಎಂಬದು ಗೌಣವಾಗಿ ನಾವು ಎಂಬದೇ ಮುಖ್ಯವಾಗಬೇಕು. ಆ ಮೂಲಕ ಸೇವಾ ಗುಣ ಎಲ್ಲರಲ್ಲಿಯೂ ಹಾಸುಹೊಕ್ಕಾಗಬೇಕೆಂದೂ ಮಹೇಶ್ ಕುಮಾರ್ ಹೇಳಿದರು.
ಪ್ರಶಸ್ತಿಗೆ ಭಾಜನರಾದ ಉಪನ್ಯಾಸಕಿ ಕೆ. ಜಯಲಕ್ಷ್ಮೀ ಮಾತನಾಡಿ, ಮಕ್ಕಳನ್ನು ಅಂಕಗಳಿಗಾಗಿ ರೂಪಿಸದೇ ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿಯೂ ಅವರನ್ನು ಬೆಳೆಸಬೇಕು. ಪರೀಕ್ಷೆಗಾಗಿ ಮಾತ್ರ ಮಕ್ಕಳನ್ನು ಶಿಕ್ಷಕ ವರ್ಗ ತಯಾರಿಸದೇ ಉತ್ತಮ ಪ್ರಜೆಗಳನ್ನಾಗಿ ಮಾಡುವತ್ತಲೂ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದರು. ಪ್ರಶಸ್ತಿ ಪಡೆದ ಟಿ.ಆರ್. ಸುಬ್ಬಮ್ಮ ಮಾತನಾಡಿ, ಇಂದಿನ ಶಾಲೆಯೇ ಮುಂದಿನ ಪ್ರಪಂಚವಾಗಿರುವಾಗ ಮಕ್ಕಳ ಭವಿಷ್ಯ ರೂಪಿಸುವ ಶಾಲೆ, ಶಿಕ್ಷಕರು ಅತ್ಯಂತ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭ ಮಿಸ್ಟಿ ಹಿಲ್ಸ್ ವತಿಯಿಂದ ಜಿಲ್ಲಾ ಕಿವುಡ ಮತ್ತು ಮೂಕರ ಸಂಘಕ್ಕೆ ನೀಡಲಾದ ಉಪಕರಣ ಗಳನ್ನು ಸಂಘದ ಅಧ್ಯಕ್ಷ ಜೋಸೆಫ್ ಸ್ಯಾಮ್ ಅವರಿಗೆ ಹಸ್ತಾಂತರಿಸಲಾಯಿತು. ರೋಟರಿ ಜೋನಲ್ ಲೆಫ್ಟಿನೆಂಟ್ ಚೀಯಣ್ಣ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ಕಾರ್ಯದರ್ಶಿ ಎಂ.ಯು. ಮಹೇಶ್ ವೇದಿಕೆಯಲ್ಲಿದ್ದರು. ಸಂಧ್ಯಾ ಅಶೋಕ್ ಪ್ರಾರ್ಥಿಸಿ, ಲೀನಾ ಪೂವಯ್ಯ ನಿರೂಪಿಸಿದರು.