ಕುಶಾಲನಗರ, ಸೆ. 15: ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಸಂದರ್ಭ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಮಕೈಗೊಂಡಿದ್ದಾರೆ. ಸುಂಟಿಕೊಪ್ಪ ವ್ಯಾಪ್ತಿಯ ಗದ್ದೆಹಳ್ಳ ಮತ್ತು ಹರದೂರು ಬಳಿ ಎರಡು ವಾಹನಗಳಲ್ಲಿ ಬೀಟೆ ಮತ್ತು ಬಳಂಜಿ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮಾರ್ಗದರ್ಶನದಲ್ಲಿ ಉಪ ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್, ಅನಿಲ್ ಅವರುಗಳು ಕಾರ್ಯಾಚರಣೆ ನಡೆಸಿ ಬೀಟೆ ಮರ ಸಾಗಿಸುತ್ತಿದ್ದ ಮಾರುತಿ ಕಾರ್ (ಕೆಎ.02.ಎನ್.7154) ಮತ್ತು ಹರದೂರು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಬಳಂಜಿ ಮರ ತುಂಬಿದ್ದ ಪಿಕ್‍ಅಪ್ ವಾಹನ (ಕೆಎ.12.ಎ.6442) ವಾಹನಗಳನ್ನು ಮರ ಸಹಿತ ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ವಲಯಾಧಿಕಾರಿ ರಂಜನ್, ಅನಿಲ್ ಡಿಸೋಜ, ಸಿಬ್ಬಂದಿಗಳಾದ ಸತೀಶ್, ಪೊನ್ನಪ್ಪ ಅವರುಗಳು ಪಾಲ್ಗೊಂಡಿದ್ದರು.