ಶನಿವಾರಸಂತೆ, ಸೆ. 11: ದುಂಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆ ಸುಳುಗಳಲೆ ಗ್ರಾಮದ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ. ಬೋಜಪ್ಪ ಮಾತನಾಡಿ, ಅಧಿಕ ಮಳೆಯಿಂದ ಈ ವಿಭಾಗದಲ್ಲಿ ಕಾಫಿ, ಭತ್ತ, ಕಾಳುಮೆಣಸು ಇತರ ಬೆಳೆಗಳಿಗೆ ಹಾನಿಯಾಗಿದೆ. ಇಲ್ಲಿಯತನಕ ಸಂಬಂಧಪಟ್ಟ ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ಆಕ್ಷೇಪಿಸಿದರು.
ದುಂಡಳ್ಳಿ ಗ್ರಾ.ಪಂ.ಗೆ ಸಂಬಂಧಿಸಿದಂತೆ 2017-18ನೇ ಸಾಲಿನಲ್ಲಿ ಜಿ.ಪಂ.ಯಿಂದ ರೂ. 20 ಲಕ್ಷ ಕ್ರಿಯಾ ಯೋಜನೆ ತಯಾರಾಗಿದ್ದು, ಇದರಲ್ಲಿ ಪೂರಾ ಕಳಪೆ ಕಾಮಗಾರಿಯಾಗಿದೆ ಎಂದು ಆರೋಪಿಸಿ ಲೋಕಾಯುಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿ, ಈ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು. ದುಂಡಳ್ಳಿ ಗ್ರಾ.ಪಂ. ಜಿಲ್ಲೆಯ ಗಡಿಭಾಗದಲ್ಲಿರುವದರಿಂದ ಯಾವದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಸರಕಾರ ಈ ಪಂಚಾಯಿತಿಯನ್ನು ವಿಶೇಷವಾಗಿ ಪರಿಗಣನೆಗೆ ತೆಗೆದುಕೊಂಡು ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೆಂದು ಬಿಳಹಾ ಗ್ರಾಮದ ಕೃಷಿಕರಾದ ಮುತ್ತೆಗೌಡ, ಪ್ರಕಾಶ್ ಒತ್ತಾಯಿಸಿದರು. ಹಾಗೂ ಕಾಡಾನೆ ಹಾವಳಿ ಈ ಭಾಗದಲ್ಲಿ ಹೆಚ್ಚುತ್ತಿದ್ದು, ಮತ್ತು ಕಾಡಾನೆ ಧಾಳಿಯಿಂದ ಗಾಯಗೊಂಡವರನ್ನು ಶಾಶ್ವತ ಫಲಾನುಭವಿ ಎಂದು ಪರಿಗಣಿಸಿ ಎರಡೂವರೆ ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ಜಿ.ಪಂ.ಗೆ ಅನುದಾನದ ಕೊರತೆಯಿಂದ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಮಳೆ ಪರಿಹಾರ ಯೋಜನೆಯಿಂದ ಜಿ.ಪಂ. ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಈಗಾಗಲೇ ಶಾಸಕರಿಗೆ ಮತ್ತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನೋಡಲ್ ಅಧಿಕಾರಿ ಶನಿವಾರಸಂತೆ ರೈತ ಸಂಪರ್ಕ ಕೇಂದ್ರದ ಸಹಾಯಕ ನಿರ್ದೇಶಕ ಎಂ. ಮುಕುಂದ ಮಾತನಾಡಿದರು. ಅತಿವೃಷ್ಟಿ ಹಿನ್ನೆಲೆಯಲ್ಲಿ ನಷ್ಟಕ್ಕೊಳಪಟ್ಟ ರೈತರಿಗೆ ಪರಿಹಾರ ನೀಡುವದರೊಂದಿಗೆ ಕೃಷಿ ಸಾಲ ಮನ್ನಾ ಮಾಡುವಂತೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಮತ್ತು ಸರಕಾರಕ್ಕೆ ಮನವಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಕೃಷಿಕರಾದ ಕೆ.ಬಿ. ಹರೀಶ್, ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಟ್ಟಮ್ಮ , ಉಪಾಧ್ಯಕ್ಷರುಗಳಾದ ಸುಬ್ರಮಣ್ಯ, ಎಸ್.ಪಿ. ಭಾಗ್ಯ, ಇತರ ಗ್ರಾಮಸ್ಥರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹಾಜರಾದ ಇಲಾಖಾಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪಾ, ಸದಸ್ಯರುಗಳಾದ ಎಸ್.ಕೆ. ಸುಮತಿ, ಮನು ಹರೀಶ್, ಬಿಂದಮ್ಮ, ಕಮಲಮ್ಮ, ಬಿ.ಎಂ. ಪಾರ್ವತಿ, ನೇತ್ರಾವತಿ, ಯೋಗೇಂದ್ರ, ಸಂತೋಷ್, ಹೂವಣ್ಣ, ಸಂದೇಶ್, ಎ.ಆರ್. ರಕ್ಷಿತ, ಲೆಕ್ಕ ಸಹಾಯಕ ದೇವರಾಜ್, ಕಂಪ್ಯೂಟರ್ ನಿರ್ವಾಹಕಿ ಪೂರ್ಣಿಮ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸ್ವಾಗತಿಸಿ, ನಿರೂಪಣೆ ಮಾಡಿದರು. ಸದಸ್ಯ ಎ.ಆರ್. ರಕ್ಷಿತ್ ವಂದಿಸಿದರು.