ಮಡಿಕೇರಿ, ಸೆ. 11: ಗಣೇಶೋತ್ಸವ ಬಂದರೆ ಕೊಡಗಿನಲ್ಲಿ ಅತೀವ ಸಡಗರ, ಎಲ್ಲೆಲ್ಲೂ ಪ್ರತಿನಿತ್ಯ ಕಾರ್ಯಕ್ರಮಗಳು, ಅದ್ಧೂರಿ ಆಡಂಬರದೊಂದಿಗೆ ಮನರಂಜನೀಯ ಕ್ರೀಡಾ ಸ್ಪರ್ಧೆಗಳು ಒಳಗೊಂಡು ವೈವಿಧ್ಯಮಯವಾಗಿ ಆಚರಿಸಲ್ಪಡುತ್ತಿದ್ದ ಗೌರಿಗಣೇಶೋತ್ಸವ ಈ ಬಾರಿ ಸಾಂಪ್ರದಾಯಿಕ ಹಾಗೂ ಸರಳ ಆಚರಣೆಗೆ ಸೀಮಿತವಾಗಿದೆ.ಎಲ್ಲೂ ಕೂಡ ಸಾಂಸ್ಕøತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಡಿಜೆ ಆಕರ್ಷಣೆಗಳಿಲ್ಲ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಕೊಡಗು ನಲುಗಿರುವ ಹಿನ್ನೆಲೆಯಲ್ಲಿ ಆಡಂಬರ ಬದಿಗಿಟ್ಟು ಸರಳ ಆಚರಣೆಗೆ ಗಣಪತಿ ಉತ್ಸವ ಸಮಿತಿಗಳು ತೀರ್ಮಾನ ಕೈಗೊಂಡಿವೆ.ಪ್ರತಿ ಬಾರಿ ಲಕ್ಷಾಂತರ ರೂ. ವ್ಯಯಿಸಿ ಹತ್ತಾರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದ್ಧೂರಿ ಆಚರಣೆಗೆ ಮುಂದಾಗುತ್ತಿದ್ದ ಉತ್ಸವ ಸಮಿತಿಗಳು ಪ್ರಸಕ್ತ ವರ್ಷ ಕೊಡಗಿನಲ್ಲಿ ಮಳೆಯಿಂದಾದ ಅನಾಹುತ ಸಾವು - ನೋವಿನ ಸಂಕಟದ ನಡುವೆಯೇ ಸಂಕಷ್ಟಹರ ಗಣಪನ ಸರಳ ಆರಾಧನೆಗೆ ಸಿದ್ಧತೆ ಕೈಗೊಂಡಿವೆ.

ಎಲ್ಲೆಲ್ಲಿ ಆರಾಧನೆ?

ಮಡಿಕೇರಿ ನಗರ ವ್ಯಾಪ್ತಿಯಲ್ಲಿ 29 ಸ್ಥಳಗಳಲ್ಲಿ ವಿನಾಯಕನ ಆರಾಧನೆ ನೆರವೇರಲಿದೆ. ಶಾಂತಿನಿಕೇತನ ಯುವಕ ಸಂಘ, ಮಂಗಳಾದೇವಿನಗರ ಆದಿಪರಾಶಕ್ತಿ ಯುವಕ ಸಂಘ, ಅಶೋಕಪುರ ಗಣಪತಿ ಸೇವಾ ಸಮಿತಿ, ಧಾರ್ಮಿಕ್ ಯುವ ವೇದಿಕೆ, ಶ್ರೀ ವಿದ್ಯಾವಾರಿದಿ ಸಮಿತಿ ದೇಚೂರು, ಉದ್ಭವ ವಿನಾಯಕನ ಸಮಿತಿ ಪುಟಾಣಿನಗರ, ಮೈತ್ರಿ ವಿಘ್ನೇಶ್ವರ ಯುವಕ ಸಂಘ, ಮಹಾಗಣಪತಿ ಸೇವಾ ಸಮಿತಿ ವಿಜಯನಗರ, ಓಂಕಾರ್ ಯುವ ವೇದಿಕೆ, ಹಿಂದೂ ಯುವ ಶಕ್ತಿ ಕೊಹಿನೂರು ರಸ್ತೆ, ವಿನಾಯ ಯುವಕ ಸಂಘ ಚೈನ್‍ಗೇಟ್, ಜ್ಯೋತಿ ಯುವಕ ಸಂಘ ಮಲ್ಲಿಕಾರ್ಜುನ ನಗರ, ಕಾಮಾಕ್ಷಿ ಯುವಕ ಸಂಘ ಗೌಳಿ ಬೀದಿ, ಕೆಇಬಿ ಗಣೇಶೋತ್ಸವ ಸಮಿತಿ, ಸಂಪಿಗೆಕಟ್ಟೆ ಯುವಕ ಸಂಘ, ದೃಷ್ಟಿ ಗಣಪತಿ ಯುವಕ ಸಂಘ ಕನ್ನಂಡಬಾಣೆ, ಕಲಾನಗರ ಸಾಂಸ್ಕøತಿಕ ವೇದಿಕೆ, ಸ್ವಸ್ತಿಕ್ ಯುವ ವೇದಿಕೆ, ಶಿವಶಕ್ತಿ ಯುವಕ ಮಿತ್ರ ಮಂಡಳಿ ಜ್ಯೋತಿ ನಗರ, ಗಣಪತಿ ಯುವಕ ಸಂಘ ಗಣಪತಿ ಬೀದಿ, ಕೇಸರಿ ಯುವಕ ಸಂಘ ಚಾಮುಂಡೇಶ್ವರಿ ನಗರ, ನಗರಸಭೆ ಗಣಪತಿ ಸಮಿತಿ, ಸಿದ್ಧಿ ವಿನಾಯಕ ಯುವಕ ಸಂಘ ರಾಜಾಸೀಟು ಹಿಂಭಾಗ, ಕರವಲೆ ಭಗವತಿ ಯುವಕ ಸಂಘ ಭಗವತಿ ನಗರ, ಪ್ರಸನ್ನ ಗಣಪತಿ ಸಮಿತಿ ಹೊಸ ಬಡಾವಣೆ, ವಿನಾಯಕ ಯುವಕ ಮಿತ್ರ ಮಂಡಳಿ ಮಹದೇವಪೇಟೆ, ಉಕ್ಕುಡ ಗಣಪತಿ ಸಮಿತಿ, ವಿನಾಯಕ ಉತ್ಸವ ಸಮಿತಿ ವಿದ್ಯಾನಗರ, ಅಭಿಷ್ಟಪ್ರದ ವಿನಾಯಕ ಸಂಘ ತ್ಯಾಗರಾಜ ಕಾಲೋನಿ.

ಪ್ರತಿವರ್ಷ ಹದಿನೈದು, ಇಪ್ಪತ್ತು ದಿನಗಳವರೆಗೆ ನಡೆಯುತ್ತಿದ್ದ ಆಚರಣೆ ಈ ಬಾರಿ ಕೆಲವು ದಿನಗಳಿಗೆ ಮಾತ್ರ ಸೀಮಿತಗೊಂಡಿದೆ. ಶಾಂತಿನಿಕೇತನ ಯುವಕ ಸಂಘ 9 ದಿನಗಳ ಉತ್ಸವ ಆಚರಣೆ ಮಾಡಲಿದ್ದು, ಉಳಿದಂತೆ ಎಲ್ಲಾ ಉತ್ಸವ ಸಮಿತಿಗಳು 9 ದಿನದ ಒಳಗಾಗಿ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಲಿವೆ.

ವೀರಾಜಪೇಟೆಯಲ್ಲೂ ಕುಂದಿದ ಸಡಗರ

ಕಳೆದ ಅರ್ಧ ಶತಮಾನಗಳ ಹಿಂದೆಯಿಂದಲೂ ವಿರಾಜಪೇಟೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದ ಇತಿಹಾಸ ಪ್ರಸಿದ್ದವಾದ ಗೌರಿಗಣೇಶನ ಆಡಂಬರ ಅದ್ದೂರಿಯ ಉತ್ಸವವನ್ನು ಈ ಬಾರಿ ಪ್ರಕೃತಿ ವಿಕೋಪ ಹಿನ್ನೆಲೆ ವೀರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಉತ್ಸವದ ಸಿದ್ದತೆ ನಿರಾಶದಾಯಕವಾಗಿ ನಡೆಯುತ್ತಿದೆ.

ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬದ ಒಕ್ಕೂಟ, ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವದರಿಂದ ಸರಳವಾಗಿ ಉತ್ಸವವನ್ನು ಆಚರಿಸಲು ನಿರ್ಧರಿಸಿರುವದರಿಂದ ಗೌರಿ ಗಣೇಶನ ವಿಸರ್ಜನೋತ್ಸವದ ಕೊನೆಯ ದಿನ ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲ 21 ಉತ್ಸವ ಸಮಿತಿಗಳು ಒಕ್ಕೂಟದ ನಿರ್ಧಾರಕ್ಕೆ ಬದ್ಧವಾಗಿವೆ.

ಈ ಹಿಂದೆ ಗೌರಿಗಣೇಶೋತ್ಸವಕ್ಕೆ ಒಂದು ತಿಂಗಳ ಹಿಂದೆಯೇ ಪೂರ್ವ ಸಿದ್ದತೆ ನಡೆಸಲಾಗುತ್ತಿತ್ತು.

(ಮೊದಲ ಪುಟದಿಂದ) ಪಟ್ಟಣದಲ್ಲಿ ಒಂದು ವಾರದ ಮೊದಲೇ ಹಬ್ಬದ ವಾತಾವರಣ ಉಂಟಾಗುತ್ತಿತ್ತು. ಆದರೆ ಇಂದು ನಿರಾಶದಾಯಕ ವಾತಾವರಣ ಉಂಟಾಗಿದೆ. ಎಲ್ಲ ಉತ್ಸವ ಸಮಿತಿಗಳು ಈ ಬಾರಿಯ ಉತ್ಸವಕ್ಕೆ ಹೆಚ್ಚಿನ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಆದರೂ ಸಾಂಪ್ರದಾಯಿಕ ಬದ್ದವಾಗಿ ಸರಳ ಉತ್ಸವದ ಆಚರಣೆಗೆ ಮುಂದಾಗಿವೆ.

ಗೌರಿ ಪಲ್ಲಕ್ಕಿ ಉತ್ಸವ ಇಂದು

ಗೌರಿ ಗಣೇಶೋತ್ಸವದ ಅಂಗವಾಗಿ ಗೌರಮ್ಮನ ಪಲ್ಲಕ್ಕಿ ಉತ್ಸವದ ಮೆರವಣಿಗೆ ತಾ. 12 ರಂದು (ಇಂದು) ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ನಡೆಯಲಿದೆ.

ಗೌರಮ್ಮನ ಪಲ್ಲಕ್ಕಿ ಉತ್ಸವ ಮೆರವಣಿಗೆ ಸಿದ್ದಾಪುರ ರಸ್ತೆಯ ದಿವಂಗತ ಡಾ: ಎನ್.ಬಿ.ಉತ್ತಪ್ಪ ಅವರ ಕೆರೆಯಿಂದ ಆರಂಭಗೊಂಡು ತೆಲುಗರಬೀದಿ, ಮೊಗರಗಲ್ಲಿಯವರೆಗೆ ತಲುಪಿ ಹಿಂತಿರುಗಿ ಮುಖ್ಯ ಬೀದಿಗಳ ಮೂಲಕ ಮೂರ್ನಾಡು ರಸ್ತೆ, ದೇವರ ಕಾಡು ರಸ್ತೆ, ಅಪ್ಪಯ್ಯ ಸ್ವಾಮಿ ರಸ್ತೆ ಮಾರ್ಗವಾಗಿ ಜೈನರ ಬೀದಿಯ ಬಸವೇಶ್ವರ ದೇವಸ್ಥಾನ ತಲುಪಿದ ನಂತರ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುವದು ಎಂದು ಬಸವೇಶ್ವರ ದೇವಾಲಯದ ಉತ್ಸವ ಸಮಿತಿ ತಿಳಿಸಿದೆ.

ವೀರಾಜಪೇಟೆ ವ್ಯಾಪ್ತಿಯಲ್ಲಿ ಕಾವೇರಿ ಗಣೇಶೋತ್ಸವ ಸಮಿತಿ, ಮೂರ್ನಾಡು ರಸ್ತೆ,ಶ್ರೀ ವಿನಾಯಕ ಸೇವಾ ಸಮಿತಿ, ಪಂಜರ್‍ಪೇಟೆ, ಶ್ರೀ ಮಹಾ ಗಣಪತಿ ಸೇವಾ ಸಂಘ, ಗಣಪತಿ ಬೀದಿ ಪಂಜರ್‍ಪೇಟೆ, ಶ್ರೀ ಬಸವೇಶ್ವರ ದೇವಲಾಯ ಜೈನರ ಬೀದಿ, ಮಹಾ ಗಣಪತಿ ದೇವಲಾಯ, ಮುಖ್ಯ ರಸ್ತೆ ಗಡಿಯಾರ ಕಂಭದ ಬಳಿ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸು ನಗರ, ವಿನಾಯಕ ಭಕ್ತ ಮಂಡಳಿ, ಅಂಗಾಳ ಪರಮೇಶ್ವರಿ ದೇವಸ್ಥಾನ ತೆಲುಗು ಶೆಟ್ಟರ ಬೀದಿ, ನೇತಾಜಿ ಗಣೇಶೋತ್ಸವ ಸಮಿತಿ, ನೆಹರು ನಗರ, ವಿಜಯ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲ, ಕಣ್ಮಣಿ ಯುವಕ ಸಂW,À ಮಲೆತಿರಿಕೆ ಬೆಟ್ಟ, ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ, ಸುಂಕದಕಟ್ಟೆ, ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಕೆ.ಬೋಯಿಕೇರಿ, ಜಲದರ್ಶಿನಿ ಗಣೇಶೋತ್ಸವ ಸಮಿತಿ. ಚಿಕ್ಕಪೇಟೆ, ಗಣಪತಿ ಸೇವಾ ಸಮಿತಿ, ಪೌರಸೇವಾ ನೌಕರರ ಸಂಘ ಪಟ್ಟಣ ಪಂಚಾಯಿತಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಹರಿಕೆರೆ ಸುಣ್ಣದ ಬೀದಿ, ಶ್ರೀ ವಿನಾಯಕ ಯುವಕರ ಸಮಿತಿ , ಕುಕ್ಲೂರು, ಶ್ರೀ ಬಾಲ ಆಂಜನೇಯ ಗಣಪತಿ ಸೇವ ಸಮಿತಿ,ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಗೌರಿಕೆರೆ ಸೇವಾ ಸಮಿತಿ, ಗೌರಿಕೆರೆ ಈ ಸಮಿತಿಗಳು ಗಣಪತಿ ಉತ್ಸವ ಆಚರಣೆ ಮಾಡಲಿವೆ.

ಬಸವೇಶ್ವರ ದೇವಾಲಯದಲ್ಲೂ ಸರಳ ಉತ್ಸವ ಆಚರಣೆ

ಈ ಬಾರಿಯ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಬಸವೇಶ್ವರ ದೇವಾಲಯದ ಗೌರಿಗಣೇಶೋತ್ಸವ ಸಮಿತಿಯಿಂದ ಸರಳವಾಗಿ ಉತ್ಸವವನ್ನು ಆಚರಿಸಲಾಗುವದು. ಸಾಂಪ್ರದಾಯದಂತೆ ಹತ್ತು ದಿನಗಳವರೆಗೆ ಗೌರಿ ಗಣೇಶನಿಗೆ ಅಪರಾಹ್ನ ಹಾಗೂ ರಾತ್ರಿ ಪೂಜಾ ಸೇವೆ ನಂತರ ತಾ. 23ರಂದು ಸಾಮೂಹಿಕ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾರನೇ ದಿನ ಬೆಳಗಿನ ಜಾವ ಗೌರಿಕೆರೆಯಲ್ಲಿ ವಿಸರ್ಜಿಸಲಾಗುವದು ಎಂದು ಉತ್ಸವ ಸಮಿತಿ ಅಧ್ಯಕ್ಷರಾದ ಎನ್.ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.

ಸೋಮವಾರಪೇಟೆಯಲ್ಲೂ ಸಂಭ್ರಮವಿಲ್ಲ

ಸೋಮವಾರಪೇಟೆ ವ್ಯಾಪ್ತಿಯಲ್ಲಿ ಗೌರಿ ಗಣೇಶೋತ್ಸವ ಈ ವರ್ಷ ಕಳೆಗುಂದಿದಂತೆ ಕಾಣಬರುತ್ತಿದೆ. ಗೌರಿ ಹಬ್ಬಕ್ಕೆ ಪೂರಕವಾದ ಸಂಭ್ರಮದ ವಾತಾವರಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಕಂಡುಬರುತ್ತಿಲ್ಲ. ಪ್ರಕೃತಿಯ ಮುನಿಸಿಗೆ ತುತ್ತಾಗಿ ಸಂಭ್ರಮದ ಉತ್ಸಾಹವನ್ನೇ ಕಳೆದುಕೊಂಡಿರುವ ಸಾರ್ವಜನಿಕರು, ಸಾಮೂಹಿಕ ಹಬ್ಬದಾಚರಣೆಗೆ ಹಿಂದೇಟು ಹಾಕುವಂತಾಗಿದೆ.

ಆದರೂ ಸಾಂಪ್ರದಾಯಿಕವಾಗಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪರಂಪರೆಯನ್ನು ಮುಂದುವರೆಸಲು ಕೆಲವು ಕಡೆ ತೀರ್ಮಾನಿಸಲಾಗಿದೆ. ಹಲವು ಭಾಗಗಳಲ್ಲಿ ಆಡಂಬರಕ್ಕೆ ತಿಲಾಂಜಲಿಯಿಟ್ಟು, ಸರಳತೆಗೆ ಪ್ರಾಧಾನ್ಯತೆ ನೀಡಲಾಗಿದೆ. ಕಳೆದ ವರ್ಷದವರೆಗೂ ಗೌರಿ ಗಣೇಶ ಹಬ್ಬಕ್ಕೆ ಒಂದೆರಡು ವಾರಗಳಿರುವಾಗಲೇ ಜನತೆ ಸಂಭ್ರಮದಿಂದ ಸಿದ್ಧತಾ ಕಾರ್ಯ ಮಾಡುತ್ತಿದ್ದರು. ಮನೆಗಳಿಗೆ ಸುಣ್ಣ ಬಣ್ಣ ಬಳಿದು ಹಬ್ಬವನ್ನು ಸ್ವಾಗತಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ಜನರು ಸಾಕಷ್ಟು ಅನಾಹುತಗಳನ್ನು ಕಂಡಿದ್ದು, ಕೆಲವರು ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ದೂರದ ಕೊಣನೂರು, ಮೈಸೂರು, ಚನ್ನರಾಯಪಟ್ಟಣ, ಹಾಸನಗಳಿಗೆ ತೆರಳಿ ತಮ್ಮಿಷ್ಟದ ಗಣಪತಿ ಮೂರ್ತಿಗಳಿಗೆ ಆರ್ಡರ್ ಕೊಟ್ಟು, ಮುಂಗಡ ಹಣ ಪಾವತಿಸಿ ಬರುತ್ತಿದ್ದ ಹಲವಷ್ಟು ಸಮಿತಿಗಳ ಪದಾಧಿಕಾರಿಗಳು ಇಂದು ಅಂತಹ ಉತ್ಸಾಹದಿಂದ ತೊಡಗಿಸಿಕೊಂಡಂತೆ ಕಂಡುಬರುತ್ತಿಲ್ಲ.

ಅದ್ದೂರಿ ಪೆಂಡಾಲ್‍ಗಳನ್ನು ಅಳವಡಿಸಿ, 11 ರಿಂದ 18, ಒಂದು ತಿಂಗಳ ಕಾಲದವರೆಗೂ ಉತ್ಸವ ಮೂರ್ತಿಗಳನ್ನು ಪೂಜಿಸಿ, ಆಕರ್ಷಕ ರಥಗಳ ಮೂಲಕ ಸಿಡಿಮದ್ದು, ಬ್ಯಾಂಡ್‍ಸೆಟ್‍ನೊಂದಿಗೆ ಮೆರವಣಿಗೆ ತೆರಳಿ ವಿಸರ್ಜನೆ ಮಾಡುವ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಗೌರಿ ಗಣೇಶ ಉತ್ಸವ ಈ ಬಾರಿ ಕಳೆಗುಂದಿದಂತೆ ಕಂಡುಬರುತ್ತಿದೆ. ಕೆಲವು ಕಡೆಗಳಲ್ಲಿ ಬೆಳಗ್ಗೆ ಪ್ರತಿಷ್ಠಾಪಿಸಿ ಸಂಜೆಯೇ ಮೂರ್ತಿಗಳನ್ನು ವಿಸರ್ಜಿಸುವ ಬಗ್ಗೆಯೂ ಚಿಂತನೆ ಹರಿಸಲಾಗಿದೆ. ಸೋಮವಾರಪೇಟೆ ನಗರ ವ್ಯಾಪ್ತಿಯಲ್ಲಿ 12, ಗ್ರಾಮಾಂತರ ಭಾಗದಲ್ಲಿ 58 ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ.

- ರಂಜಿತ್, ಡಿಎಂಆರ್, ವಿಜಯ್, ಈಶ್ವಾನಿ