ಸೋಮವಾರಪೇಟೆ,ಸೆ.11 : ಕೆರೆ ಒತ್ತುವರಿ ಮಾಡಿಕೊಂಡಿರುವದರಿಂದ ಸಾರ್ವಜನಿಕ ರಸ್ತೆಯ ಮೇಲೆ ನೀರು ಹರಿದು ರಸ್ತೆಗೆ ಹಾನಿಯಾಗುತ್ತಿದ್ದು, ಒತ್ತುವರಿಯನ್ನು ತೆರವುಗೊಳಿಸಿ ಎಂದು ಗ್ರಾಮ ಸಭೆಯಲ್ಲಿ ಒತ್ತಾಯಿಸಿದ್ದಕ್ಕೆ ಈರ್ವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಸಮೀಪದ ಗೋಣಿಮರೂರು ಗ್ರಾಮದಲ್ಲಿ ಇಂದು ರಾತ್ರಿ 8 ಗಂಟೆಗೆ ಸಂಭವಿಸಿದೆ. ಗಣಗೂರು ಗ್ರಾಮ ಸಭೆ ಇಂದು ಗೋಣಿಮರೂರು ಶಾಲೆಯಲ್ಲಿ ಅಧ್ಯಕ್ಷೆ ಸವಿತ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದು, ಗಣಗೂರು ಕೆರೆ ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಸಾರ್ವಜನಿಕ ರಸ್ತೆ ಹಾನಿಗೀಡಾಗುತ್ತಿದ್ದು, ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರ ಸಾರ್ವ ಜನಿಕರು ಒತ್ತಾಯಿಸಿದ್ದರು. ಸಭೆ ಮುಗಿದ ನಂತರ ಎಲ್ಲರೂ ಹಿಂತೆರಳಿದ್ದು, ಸಂಜೆ ಚಂದ್ರಶೇಖರ್ ಮತ್ತು ಅನಿಲ್ ಅವರುಗಳು ಗೋಣಿಮರೂರು ಗ್ರಾಮದ ಜಂಕ್ಷನ್ ಬಳಿ ನಿಂತಿದ್ದ ಸಂದರ್ಭ, ಆಟೋವೊಂದರಲ್ಲಿ ಆಗಮಿಸಿದ ಅಣ್ಣಪ್ಪಶೆಟ್ಟಿ ಎಂಬವರ ಪುತ್ರ ಶಿವಕುಮಾರ್ ಮತ್ತು ನಂದ ಎಂಬವರ ಪುತ್ರ ರಾಕೇಶ್ ಅವರುಗಳು ತಮ್ಮ ಬಳಿಯಿದ್ದ ಕತ್ತಿಯಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಚಂದ್ರಶೇಖರ್ ಅವರ ತಲೆ ಮತ್ತು ಕೈ, ಅನಿಲ್ ಅವರ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.