ಶನಿವಾರಸಂತೆ, ಸೆ. 11: ಸೋಮವಾರ ಬೆಳಗ್ಗಿನ ಜಾವ 2.30 ಗಂಟೆಗೆ ಶನಿವಾರಸಂತೆಯ ಸಮೀಪದ ಗುಡುಗಳಲೆಯ ವಿಘ್ನೇಶ್ವರ ವ್ಹೀಲ್ ಅಲೈನ್‍ಮೆಂಟ್ ಅಂಗಡಿಯ ಶೆಟರ್ಸ್‍ನ ಬೀಗ ಒಡೆದು ಒಳ ನುಗ್ಗಿ ಕಳುವು ಮಾಡಲು ಯತ್ನಿಸಿದಾಗ ಪೊಲೀಸರ ಆಗಮನದಿಂದ ಕಳವು ಪ್ರಯತ್ನ ತಪ್ಪಿತು.

ಗುಡುಗಳಲೆ ಗ್ರಾಮದಲ್ಲಿ ಮಿತಿಲೇಶ್ ಎಂಬವರಿಗೆ ಸೇರಿದ ವಿಘ್ನೇಶ್ವರ ವ್ಹೀಲ್ಸ್ ಅಲೈನ್‍ಮೆಂಟ್ ಅಂಗಡಿಯ ಶೆಟರ್ಸ್‍ನ ಬೀಗದ ಪತಿಯನ್ನು ಕಟರ್ ಉಪಯೋಗಿಸಿ ಕಟ್ ಮಾಡಿ ಅಂಗಡಿಯ ಬಳಿ ನುಗ್ಗಿದ ಕಳ್ಳ ಅಂಗಡಿಯೊಳಗಿನಿಂದ ಲ್ಯಾಪ್‍ಟಾಪ್‍ನ್ನು ತೆಗೆದುಕೊಂಡು ಹೋರ ಬರುತ್ತಿರುವಾಗ, ಶನಿವಾರಸಂತೆ ಪೊಲೀಸ್ ಠಾಣೆಯ ರಾತ್ರಿ ಗಸ್ತಿನಲ್ಲಿದ್ದ ಹೆಡ್‍ಕಾನ್ಸ್‍ಟೇಬಲ್ ಹೆಚ್.ಸಿ. ಶಿವಲಿಂಗ ಹಾಗೂ ಹೋಮ್ ಗಾರ್ಡ್ ಗಣೇಶ್ ಅವರುಗಳು ಮಂಕಿ ಕ್ಯಾಪ್ ಧರಿಸಿದ್ದ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿ ಬೆನ್ನಟ್ಟಿದಾಗ, ಕಳ್ಳ ಲ್ಯಾಪ್‍ಟಾಪ್‍ನ್ನು ಬಿಸಾಡಿ ಹಿಂಬದಿಯಲ್ಲಿ ಹರಿಯುತ್ತಿರುವ ಹೊಳೆಗೆ ಹಾರಿ ಕತ್ತಲೆಯಲ್ಲಿ ಪರಾರಿಯಾದ ವಿಚಾರ ತಿಳಿದ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಮಡಿಕೇರಿಯಿಂದ ಸ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರೀಕ್ಷಿಸಲಾಯಿತು.