ಮಡಿಕೇರಿ, ಸೆ. 11: ಸರಿ ಸುಮಾರು ಮೂರು ತಿಂಗಳು ಎಡೆಬಿಡದೆ ಸುರಿದ ಮಳೆಯ ನಡುವೆ ತೀವ್ರ ಸಂಕಷ್ಟಕ್ಕೆ ಸಿಲುಕಿ ದಿಕ್ಕಾಪಾಲಾಗಿದ್ದ ಜನತೆ ಮತ್ತೆ ಆಶಯದ ಬದುಕಿನೆಡೆಗೆ ಚಿತ್ತ ಹರಿಸತೊಡಗಿದ್ದಾರೆ. ಬಹಳಷ್ಟು ಮಂದಿ ಆಗಸ್ಟ್ ಮಧ್ಯದಲ್ಲಿ ತಾ. 15 ರಿಂದ 19ರ ನಡುವೆ ಮಳೆಯ ಹೊಡೆತಕ್ಕೆ ಸಿಲುಕಿ ವಿಪರೀತ ಹಾನಿಗೆ ಹೆದರಿ ಮನೆ - ಗ್ರಾಮಗಳನ್ನೇ ತೊರೆದಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ 40ಕ್ಕೂ ಅಧಿಕ ಸಂತ್ರಸ್ತರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು. ಇನ್ನು ಕೆಲವರು ದೂರದ ಬಂಧುಗಳು ಹಾಗೂ ಹೊರ ಜಿಲ್ಲೆಯಲ್ಲಿ ಉದ್ಯೋಗದಲ್ಲಿರುವ ತಮ್ಮ ಮಕ್ಕಳು ಮತ್ತು ಇತರರ ಮನೆಗಳನ್ನು ಸೇರಿಕೊಂಡಿದ್ದರು.
ಈಗಿನ ಬಿಸಿಲಿನ ನಡುವೆ ಅಂತವರಲ್ಲಿ ಮನೆಗಳನ್ನು ತೊರೆದಿದ್ದವರು ವಾಪಸಾಗುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಲಭಿಸಿರುವ ಆರ್ಥಿಕ ಸಹಾಯದೊಂದಿಗೆ ನಿತ್ಯೋಪಯೋಗಿ ವಸ್ತುಗಳ ಸಹಿತ ಗ್ರಾಮಗಳಿಗೆ ವಾಪಸ್ಸಾಗುತ್ತಿದ್ದಾರೆ.
ಒಂದೆಡೆ ಅಧಿಕಾರಿಗಳ ತಂಡ ಹಾಗೂ ಜನಪ್ರತಿನಿಧಿಗಳು ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ನಷ್ಟದ ಅಂದಾಜು ಪಟ್ಟಿ ಸಿದ್ಧಗೊಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇನ್ನೊಂದೆಡೆ ಅನೇಕ ಉದ್ದಿಮೆಗಳು, ಸಂಘ - ಸಂಸ್ಥೆಗಳು ಜನತೆಯ ಕೊರತೆಗಳನ್ನು ತುಂಬಲು ಸಹಾಯ ಹಸ್ತ ಚಾಚುತ್ತಿದ್ದಾರೆ.
ಗೊಂದಲದ ಬದುಕು : ಮುಕ್ಕೋಡ್ಲು, ಉದಯಗಿರಿ, ಕಾಲೂರು, ಎಮ್ಮೆತ್ತಾಳು, ಮೊಣ್ಣಂಗೇರಿ, ದೇವಸ್ತೂರು, ಜೋಡುಪಾಲ, ನಿಡುವಟ್ಟು, ಕಾಟಕೇರಿ, ಮೂವತ್ತೊಕ್ಲು, ಇಗ್ಗೋಡ್ಲು, ಆವಂಡಿ, ಹೆಬ್ಬೆಟ್ಟಗೇರಿ, ಮದೆ ಮುಂತಾದೆಡೆಗಳಲ್ಲಿ ಪರಿಹಾರ ಕೇಂದ್ರಗಳಿಂದ ಗ್ರಾಮಗಳಿಗೆ ತೆರಳಿರುವ ಮಂದಿ ಬಿದ್ದು ಹೋಗಿರುವ ಮನೆಗಳಲ್ಲಿ ಹುದುಗಿರುವ ವಸ್ತುಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಮಣ್ಣು ಪಾಲಾಗಿದ್ದ ಜೀಪು : ಕಾಲೂರು ಗ್ರಾಮದ ಬಾರಿಬೆಳ್ಳಚ್ಚು ಎಂಬಲ್ಲಿ ಕುಳೋಡಂಡ ದೇವಯ್ಯ ಎಂಬವರ ಪುತ್ರ ಕೆ.ಡಿ. ಮಂದಣ್ಣ ಅವರಿಗೆ ಸೇರಿದ ಜೀಪೊಂದು (ಕೆ.ಎ. 21 3266) ಮನೆಯಿಂದ ಆಗಸ್ಟ್ 16 ರಂದು ಸುಮಾರು 200 ಮೀಟರ್ ದೂರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಮಣ್ಣಿನಡಿ ಸಿಲುಕಿಕೊಂಡಿತ್ತು. ಈ ಜೀಪನ್ನು ಕ್ರೇನ್ ಯಂತ್ರದ ಸಹಾಯದಿಂದ ಹೊರ ತೆಗೆಸುವಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಹಕರಿಸಿದ್ದು, ಜೀಪು ದುರಸ್ತಿ ಪಡಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಇಂತಹ ಪ್ರಸಂಗ ಹಲವೆಡೆ ಇರುವದಾಗಿ ಅನೇಕರು ‘ಶಕ್ತಿ’ಯೊಂದಿಗೆ ವಿವರಿಸಿದ್ದಾರೆ. ಜೋಡುಪಾಲ - ಮದೆನಾಡು ಬಳಿಯೂ ಗೂಡ್ಸ್ ರಿಕ್ಷಾವೊಂದರ ಅವಶೇಷ ಗೋಚರಿಸಿದೆ.
ಸೇತುವೆಗಳೇ ಮಾಯ: ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಸೇತುವೆಗಳು ನಾಶಗೊಂಡಿದ್ದು, ಮಾದಾಪುರ ಬಳಿಯ ನಂದಿಮೊಟ್ಟೆ - ಶಿರಂಗಳ್ಳಿ, ಗರ್ವಾಲೆ ಸಂಪರ್ಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿವೆ. ಇಲ್ಲಿ ಬ್ರಿಟಿಷ್ ಕಾಲದ ಕಾಲು ಸೇತುವೆ ಇಂದಿಗೂ ಇದ್ದು, ಕೇವಲ ಮೂರ್ನಾಲ್ಕು ವರ್ಷದ ಹಿಂದಿನ ನೂತನ ಸೇತುವೆ ನೀರು ಪಾಲಾಗಿದೆ.
ಇನ್ನೊಂದೆಡೆ ಕಾಲೂರು ಗರಾಮದ ಕೊರಿಯನ ಮನೆ ಬಳಿ ಕೂಡ ನಾಲ್ಕಾರು ವರ್ಷಗಳ ಹಿಂದಿನ ಸಂಪರ್ಕ ಸೇತುವೆ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಚಿತ್ರಣ ಎದುರಾಯಿತು. ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಅಪ್ಪಚ್ಚುರಂಜನ್ ಬಳಿ ಅಲ್ಲಿನ ನಿವಾಸಿಗಳು ಹಾನಿಗೊಂಡಿರುವ ಸೇತುವೆಗಳ ಮರು ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದರು.
ಕಾಲೂರು - ಹಮ್ಮಿಯಾಲ ನಡುವೆ ಮಾಂದಲಪಟ್ಟಿ ಮಾರ್ಗದ ಹತ್ತಾರು ಕಡೆಗಳಲ್ಲಿ ರಸ್ತೆ, ಮೋರಿಗಳು ಪ್ರವಾಹದಿಂದ ಧ್ವಂಸಗೊಂಡಿದ್ದು, ಬದಲಿ ವ್ಯವಸ್ಥೆ ಅನಿವಾರ್ಯವೆಂದು ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಗವಿಸಿದ್ಧಯ್ಯ ಶಾಸಕರ ಗಮನ ಸೆಳೆದಿದ್ದಾರೆ.
ಭಯಾನಕ: ಮುಖ್ಯವಾಗಿ ಹಾಲೇರಿ, ಕಾಂಡನಕೊಲ್ಲಿ, ಎಮ್ಮೆತ್ತಾಳು, ಮಕ್ಕಂದೂರು, ವ್ಯಾಪ್ತಿಯ ಉದಯಗಿರಿ ಮತ್ತು ಮೇಘತ್ತಾಳು, 2ನೇ ಮೊಣ್ಣಂಗೇರಿ, ದೇವರಕೊಲ್ಲಿ, ಕಾಟಕೇರಿ, ಹೆಬ್ಬೆಟ್ಟಗೇರಿ, ಕಾಲೂರು, ನಿಡುವಟ್ಟು ಮುಂತಾದೆಡೆಗಳಲ್ಲಿ ಭಯಾನಕ ಜಲಸ್ಫೋಟ ಹಾಗೂ ಭೂ ಕುಸಿತದ ದೃಶ್ಯಗಳು ಎಲ್ಲಾ ದುರಂತಗಳಿಗೆ ಸಾಕ್ಷಿಯಾಗಿ ನಿಂತಂತಿವೆ. ಹೀಗಾಗಿ ಜಿಲ್ಲಾಡಳಿತವು ಪ್ರಸಕ್ತ ನಿರ್ದಿಷ್ಟವಾಗಿ ಹಾನಿಗೆ ಸಿಲುಕಿರುವ ಕುಟುಂಬಗಳ ಸಮೀಕ್ಷೆಯೊಂದಿಗೆ ಅಂತಹವರಿಗೆ ತುರ್ತಾಗಿ ತಾತ್ಕಾಲಿಕ ನೆಲೆ ಕಲ್ಪಿಸುವ ದಿಸೆಯಲ್ಲಿ ಕಾರ್ಯೋನ್ಮುಖ ವಾಗಿದ್ದು, ಸಂಪೂರ್ಣ ಮಾಹಿತಿ ಕಲೆಹಾಕುವಲ್ಲಿ ತೊಡಗಿಸಿಕೊಂಡಿದೆ.
- ಶ್ರೀಸುತ