ಮಡಿಕೇರಿ, ಸೆ. 11: ಕಳೆದು ಮೂರು ತಿಂಗಳಿನಿಂದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಗೆ ಭೂಕುಸಿತ ಉಂಟಾಗಿ ಕಾಫಿ, ಕಾಳುಮೆಣಸು, ಏಲಕ್ಕಿ, ಅಡಿಕೆ, ಭತ್ತ ಹಾಗೂ ಇತರ ಉಪ ಬೆಳೆಗಳು ನಾಶವಾಗಿದೆ. ಕೆಲವು ಭಾಗಗಳಲ್ಲಿ ಮನೆ, ತೋಟಗಳು ಹಾಗೂ ಸಾಕು ಪ್ರಾಣಿಗಳನ್ನು ಕಳೆದುಕೊಂಡು ಪೂರ್ಣ ಪ್ರಮಾಣದ ನಷ್ಟವಾಗಿ ಜನರು ನಿರ್ಗತಿಕರಾಗಿದ್ದಾರೆ.
ಈ ಹಾನಿ ಬಗ್ಗೆ ಕಾಫಿ ಮಂಡಳಿ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಗ್ರಾಮ ಮಟ್ಟದಿಂದ ತುರ್ತು ಜಂಟಿ ಸರ್ವೆ ಕೈಗೊಂಡು ಸಮೀಕ್ಷೆ ನಡೆಸಿ, ಸರಕಾರಕ್ಕೆ ಮತ್ತು ನೆರೆ ಸಂತ್ರಸ್ತರ ಪರಿಹಾರ ಆಯೋಗಕ್ಕೆ ತುರ್ತು ವರದಿಯನ್ನು ನೀಡಿ ಪರಿಹಾರ ದೊರಕಿಸಿಕೊಡುವಲ್ಲಿ ಮುಂದಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.