ಮಡಿಕೇರಿ, ಸೆ. 10 : ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿರುವ ಕೊಡಗಿನ ನಿರಾಶ್ರಿತರಿಗೆ ಶೀಘ್ರ ಶಾಶ್ವತ ಪುನರ್ವಸತಿಗಾಗಿ ರಾಜ್ಯ ಸರ್ಕಾರ ‘ವಿಶೇಷ ಪ್ಯಾಕೇಜ್’ನ್ನು ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವದಾಗಿ ಸುವರ್ಣ ಕನ್ನಡ ನಾಡು ಯುವ ವೇದಿಕೆ ರಾಜ್ಯಾಧ್ಯಕ್ಷ ಅಜಿತ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ತನ್ನನ್ನು ಒಳಗೊಂಡಂತೆ ಸಂಘಟನೆಯ ಎಂಟು ಮಂದಿ ಜಿಲ್ಲೆಯ ಹಾನಿ ಪೀಡಿತ ಪ್ರದೇಶಗಳಿಗೆ ತೆರಳಿ, ಸಂತ್ರಸ್ತರ ಅಳಲು, ಅಲ್ಲಿನ ಪರಿಸ್ಥಿತಿ, ಜನಪ್ರತಿನಿಧಿಗಳ ಅನಿಸಿಕೆಗಳನ್ನು ದಾಖಲಿಸಿದ ಡಿ.ವಿ.ಡಿ. ಯನ್ನು ರಾಜ್ಯದ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳಿಗೆ ತಲಪಿಸುವ ಮೂಲಕ ಕೊಡಗಿನ ಪುನರ್ ನಿರ್ಮಾಣಕ್ಕೆ ಅಗತ್ಯ ನೆರವನ್ನು ಒದಗಿಸಲು ಮನವಿ ಮಾಡಿಕೊಂಡಿದ್ದು ದಾಗಿ ಮಾಹಿತಿ ನೀಡಿದರು.

ಮಹಾ ಮಳೆಯಿಂದಾಗಿ ಕೊಡಗಿನ ಕೊತ್ನಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ಕುಡಿಗಾಣ, ಕುಮಾರಳ್ಳಿ, ಮಲ್ಲಳ್ಳಿ, ಹರಗ, ಬೆಟ್ಟದಹಳ್ಳಿ, ಬಾಚಳ್ಳಿ, ಕಿರಗಂದೂರು, ತಾಕೇರಿ, ಮಾದಾಪುರ, ಮೂವತ್ತೊಕ್ಲು, ಉದಯಗಿರಿ, ಹಾಲೇರಿ, ಮಕ್ಕಂದೂರು, ತಂತಿಪಾಲ, ಹೆಮ್ಮೆತ್ತಾಳು, ಮದೆನಾಡು, ಕಾಟಕೇರಿ, ಮೊಣ್ಣಂಗೇರಿ, 2ನೇ ಮೊಣ್ಣಂಗೇರಿ, ತಾಳತ್‍ಮನೆ, ಜೋಡುಪಾಲ ಸೇರಿದಂತೆ ಅನೇಕ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲ ಸಮಸ್ಯೆಗಳನ್ನು ಚಿತ್ರೀಕರಿಸಿ ಕೊಳ್ಳುವ ಮೂಲಕ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿರುವದರೊಂದಿಗೆ, ಟ್ವಿಟ್ಟರ್ ಮೂಲಕವು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿರುವದಾಗಿ ಮಾಹಿತಿ ನೀಡಿದರು.

ಮಲತಾಯಿ ಧೋರಣೆ- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅತಿವೃಷ್ಟಿ ಪೀಡಿತ ನೆರೆಯ ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೆ, ವಿವಿಧ ರಾಜ್ಯಗಳಿಗೆ ಕಾವೇರಿ ನೀರನ್ನು ನೀಡುತ್ತಿರುವ, ರಾಷ್ಟ್ರ ರಕ್ಷಣೆಗೆಗಾಗಿ ಜನರಲ್‍ಗಳನ್ನು, ಸೈನ್ಯಾಧಿಕಾರಿಗಳನ್ನು, ಯೋಧರನ್ನು ನೀಡಿದ, ಅಪ್ರತಿಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿರುವ ಕೊಡಗು ಮಹಾ ಮಳೆಯಿಂದ ತತ್ತರಿಸಿದ್ದರು ಇಲ್ಲಿಗೆ ಭೇಟಿ ನೀಡದೆ ಮಲತಾಯಿ ಧೋರಣೆಯನ್ನು ತಳೆದಿರುವದಾಗಿ ಆರೋಪಿಸಿ, ಇನ್ನಾದರೂ ಕೊಡಗಿಗೆ ಭೇಟಿ ನೀಡಿ, ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದರು.

ಹೋರಾಟ ಎಚ್ಚರಿಕೆ: ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಸಂಘಟನೆ ಈ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಅವರನ್ನು ಸಂಪರ್ಕಿಸಿದಾಗ ಅವರು, ಅತ್ಯಂತ ನಿಷ್ಕಾಳಜಿಯಿಂದ ಉತ್ತರಿಸಿ ದ್ದಾರೆಂದು ಟೀಕಿಸಿ, ಸಂಸದರು ತಮ್ಮ ಧೋರಣೆಯನ್ನು ಬದಲಿಸಿಕೊಂಡು ಕೊಡಗಿನ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿಗಳ ಗಮನ ಸೆಳೆಯುವ ಕಾರ್ಯವನ್ನು ಮಾಡುವಂತಾಗಲಿ. ಸಂಸದರು ತಮ್ಮ ಧೋರಣೆಯನ್ನು ಬಿಡದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಯಾವದೇ ಕ್ಷೇತ್ರದಲ್ಲಿ ಕಣಕ್ಕಿಳಿದರೂ ಅವರ ವಿರುದ್ಧ ಹೋರಾಟ ರೂಪಿಸುವ ಎಚ್ಚರಿಕೆ ನೀಡಿದರು.

ಪುನರ್ವಸತಿಗೆ ಸಹಕರಿಸಿ- ಅತಿವೃಷ್ಟಿಯಿಂದ ಉಂಟಾದ ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಕೊಡಗಿಗೆ ನೆರವಿನ ಹಸ್ತವನ್ನು ಚಾಚಿದ್ದಾರೆ. ಇದೀಗ ಜಿಲ್ಲೆಗೆ ಬಟ್ಟೆ ಬರೆ, ಆಹಾರದ ನೆರವಿಗಿಂತಲೂ ನಿರ್ವಸತಿಗರಿಗೆ ಶಾಶ್ವತ ನೆಲೆ ಕಲ್ಪಿಸಲು ನೆರವು ನೀಡುವಂತೆ ಕೋರಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಎಂ.ಆರ್. ಸಂಪತ್ ರಾಜ್, ಕೊತ್ನಳ್ಳಿಯ ಎಸ್.ಡಿ. ಯೋಗೇಶ್, ಕೆ.ಪಿ. ಉದಯ್, ಬೆಟ್ಟದಳ್ಳಿಯ ಕೆ.ಕೆ. ಈರಪ್ಪ ಹಾಗೂ ಶನಿವಾರಸಂತೆಯ ಎಸ್.ಎಸ್. ದಿನೇಶ್ ಉಪಸ್ಥಿತರಿದ್ದರು.