ಸಿದ್ದಾಪುರ, ಸೆ. 10: ಜಿಲ್ಲೆಯ ನೆಲ್ಯಹುದಿಕೇರಿ ಗ್ರಾಮದ ಯುವಕರಿಬ್ಬರು ಸಾವಿರಾರು ಕಿ.ಮೀ ದೂರ ಬೈಕ್ ಸವಾರಿ ಮಾಡುವ ಮೂಲಕ ಭಾರತ ಪರ್ಯಟನೆ ಮಾಡಿ ಕನಸಿನ ಗುರಿ ಮುಟ್ಟಿದ್ದಾರೆ. ನೆಲ್ಯಹುದಿಕೇರಿ ಕುಂಬಾರಗುಂಡಿ ನಿವಾಸಿಗಳಾದ ಅನೀಶ್ ಹಾಗೂ ಅಜೇಶ್ ಎಂಬ ಸಹೋದರರೇ ಸಾಹಸ ಮೆರೆದ ಯುವಕರು. 36 ದಿನಗಳಲ್ಲಿ ಸುಮಾರು 9ಸಾವಿರ ಕಿ.ಮೀ ದೂರ ತಮ್ಮ ಬುಲೆಟ್ ಬೈಕಿನಲ್ಲಿ ಪ್ರಯಾಣ ಮಾಡಿದ ಇವರು ದೇಶದ ವಿವಿಧ ರಾಜ್ಯಗಳ ಮೂಲಕ ಸಂಚರಿಸಿ ವಿನೂತನ ಅನುಭವ ಪಡೆದು ಕೊಂಡಿದ್ದಾರೆ. ದೇಶದ ಸೇನೆಯ ವಿವಿಧ ಮ್ಯೂಸಿಯಂಗಳ ದರ್ಶನ ಮಾಡುವದು ಮತ್ತು ಸೈನಿಕರನ್ನು ನೇರವಾಗಿ ಭೇಟಿ ಮಾಡಿ ಅವರ ಅನುಭವ ತಿಳಿದು ಕೊಳ್ಳುವದೇ ಸಾಹಸಕ್ಕೆ ಮುಂದಾಗಲು ಕಾರಣ ಎಂಬವದಾಗಿ ಅನೀಶ್ ಮತ್ತು ಅಜೇಶ್ ತಿಳಿಸಿದ್ದಾರೆ.

ನೆಲ್ಯಹುದಿಕೇರಿ ಗ್ರಾಮದಿಂದ ಇತ್ತೀಚೆಗೆ ಬೈಕ್ ಸವಾರಿ ಆರಂಭಿಸಿ ಮಂಗಳೂರು ಮಾರ್ಗವಾಗಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ. ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶದ ಮೂಲಕ ಜಮ್ಮು ಮತ್ತು ಕಾಶ್ಮೀರ ಪ್ರವೇಶ ಮಾಡಿದೆ. ಮರಳಿ ದೆಹಲಿ ಮಾರ್ಗವಾಗಿ ಹೈದ್ರಾಬಾದ್, ಬೆಂಗಳೂರು, ಮೈಸೂರು ಮೂಲಕ ಗ್ರಾಮಕ್ಕೆ ಮರಳಿ ಬಂದಿದ್ದಾರೆ.

ವಿವಿಧ ಸ್ಥಳಗಳಿಗೆ ಭೇಟಿ: ಜೋಗ್ ಫಾಲ್ಸ್, ಮುರುಡೇಶ್ವರ, ಶಿರಡಿ, ಅಜಂತ, ಎಲ್ಲೋರ, ಗೋಕರ್ಣ, ಪುಣೆ, ಮುಂಬಯಿ, ಔರಂಗಾಬಾದ್, ಇಂಧೋರ್, ಜೋದ್‍ಪುರ, ಜೈಪುರ, ಅಮೃತಸರ್, ಶ್ರೀನಗರ, ಜಮ್ಮು, ಲಡಾಕ್, ಮನಾಲಿ ಮುಂತಾದ ಕಡೆಗಳಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳು, ಸೈನಿಕರ ಮೂಸಿಯಂ ಮತ್ತು ಪ್ರವಾಸಿ ಕೇಂದ್ರಗಳ ಭೇಟಿ ಮಾಡಿದ ಇವರು ಸೈನಿಕರನ್ನೂ ಭೇಟಿ ಆಗಿ ಗುರಿ ಪೂರೈಸಿದ್ದಾರೆ.

ಮ್ಯೂಸಿಯಂ ಗಳ ಭೇಟಿ: ಲಡಾಕ್ ಮತ್ತು ಕಾರ್ಗಿಲ್ ಮ್ಯೂಸಿಯಂ ಗಳಿಗೆ ಭೇಟಿ ನೀಡಿದ ಇವರು ಸೈನಿಕರ ಯುದ್ದದ ಅನುಭವಗಳು ಮತ್ತು ಅವರ ಸಾಧನೆಗಳನ್ನು ಕಣ್ತುಂಬಿ ಕೊಂಡಿ ದ್ದಾರೆ. ಕಾರ್ಗಿಲ್ ಮ್ಯೂಸಿಯಂನಲ್ಲಿ ಕಾರ್ಗಿಲ್ ಯುದ್ದದ ಸಂಪೂರ್ಣ ಚಿತ್ರಣವನ್ನು ಪ್ರೊಜೆಕ್ಟರ್ ಮೂಲಕ ತೋರಿಸುತ್ತಿದ್ದು, ಅದನ್ನು ಭಾರತೀಯರಾದವರು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ತಿಳಿದು ಕೊಳ್ಳಬೇಕಿದೆ ಎಂಬವದಾಗಿ ಹರ್ಷದಿಂದ ಅನುಭವ ಹಂಚಿ ಕೊಂಡಿದ್ದಾರೆ.

ವಿನೂತನ ಅನುಭವ: ಸವಾರಿಯುದ್ದಕ್ಕೂ ವಿನೂತನ ಅನುಭವ ಆಗಿದೆ ಎನ್ನುವ ಇವರು ಪಂಜಾಬ್ ರಾಜ್ಯದಲ್ಲಿ ಸವಾರಿ ಮಾಡುತ್ತಿದ್ದ ಸಂದರ್ಭ ಕರ್ನಾಟಕ ನೋಂದಣಿಯ ಬೈಕ್ ಕಂಡು ಅವರನ್ನೇ ಹಿಂಬಾಲಿಸಿ ಕೊಂಡು ಹೋದ ತಂಡವೊಂದು ಅವರಿಬ್ಬರಿಗೂ ಬೇಕಾದ ಊಟ, ವಸತಿ ಮತ್ತು ಮಾರ್ಗದರ್ಶನ ನೀಡಿ ಬೀಳ್ಕೊಟ್ಟಿರುವದಾಗಿ ತಿಳಿಸಿದರು. ಜೋಧ್‍ಪುರದಲ್ಲಿ ರಾಯಲ್ ರೈಡರ್ಸ್ ಎಂಬ ಬೈಕ್ ಸವಾರಿ ತಂಡ ಕೂಡಾ ಇವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿರುವದಾಗಿ ತಿಳಿಸಿದ್ದಾರೆ. ಮದ್ಯಪ್ರದೇಶದ ಫಂಡಾನ ಎಂಬಲ್ಲಿ ಇವರಿಬ್ಬರನ್ನೂ ಕಂಡ ಅಲ್ಲಿನ ಸ್ಥಳೀಯರು ಅವರ ಸಾಹಸ ಮತ್ತು ಗುರಿಯನ್ನು ಮೆಚ್ಚಿ ಪತ್ರಿಕಾ ಕಚೇರಿಗೆ ಕರೆದು ಕೊಂಡು ಹೋಗಿ ಪತ್ರಿಕಾ ಗೋಷ್ಠಿ ಮಾಡಿಸಿ ಬೀಳ್ಕೊಟ್ಟಿದ್ದಾರೆ.

ಯೋಧರ ನಾಡು ಕೊಡಗಿನಿಂದ ಗಡಿ ಕಾಯುವ ಯೋಧರನ್ನು ನೇರವಾಗಿ ಕಾಣ ಬೇಕೆಂಬ ಬಯಕೆ ಯೊಂದಿಗೆ ಬೈಕ್ ಸವಾರಿ ಮಾಡಿ ಸಾಹಸ ಮೆರೆದಿರುವ ನೆಲ್ಯಹುದಿಕೇರಿ ಗ್ರಾಮದ ಸಹೋದರರ ಗುರಿ ಮತ್ತು ಸಾಧನೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಮ್ಮ ಬಹಳ ದಿನದ ಕನಸು ಸಾರ್ಥಕವಾಗಿದೆ. ದೇಶದ ಸೈನಿಕರನ್ನು ಭೇಟಿ ಮಾಡಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದೇವೆ. ಕಾರ್ಗಿಲ್ ಮ್ಯೂಸಿಯಂ ಭೇಟಿ ನೆನಪಿನಾಳದಲ್ಲಿ ಉಳಿಯುವಂತ ದ್ದಾಗಿದೆ. ಅಧಿಕ ಉಷ್ಣಾಂಶದಲ್ಲಿ ಅವರು ಕೈಗೊಂಡ ಕಾರ್ಯಚರಣೆಯು ನೆನಪಿಸುವಂತಾಗಿದೆ ಎಂದು ಸ್ಮರಿಸಿದರು. ಕುಗ್ರಾಮದ ಯುವಕರ ಅದ್ಭುತ ಸಾಧನೆಯ ಬಗ್ಗೆ ಗ್ರಾಮಸ್ಥರು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

-ಎ.ಎನ್. ವಾಸು