ಕರ್ನಾಟಕದಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಸೆ.10 : ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಹಾಗೂ ಹಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬಂದ್ ಶಾಂತಿಯುತವಾಗಿ ನಡೆಯಿತಾದರೂ, ಉಡುಪಿ ಭಾಗದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಆದರೆ ಮೆಟ್ರೋ ಸಂಚಾರ ಎಂದಿನಂತೆ ಇದ್ದದ್ದು ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗಿನ ಅನುಕೂಲವಾಗಿತ್ತು. ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಿರುವ ಘಟನೆಯೂ ನಡೆದಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬಂದ್ ಗೆ ಪ್ರತಿಕ್ರಿಯೆ ದೊರೆಯದೇ ಮಿಶ್ರ ಪ್ರಕ್ರಿಯೆ ಸಿಕ್ಕಿದ್ದು, ಸಂಜೆ ವೇಳೆಗೆ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಉಡುಪಿಯಲ್ಲಿ 144 ಸೆಕ್ಷನ್ ಜಾರಿ

ಉಡುಪಿ, ಸೆ.10 : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಉಡುಪಿ ನಗರದಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಘರ್ಷಣೆಯಲ್ಲಿ ತೊಡಗಿದ್ದು ಕಾನೂನು ಉಲ್ಲಂಘನೆಯಾಗುವ ಹಿನ್ನೆಲೆಯಲ್ಲಿ ನಗರದಾದ್ಯಂತ ಮಂಗಳವಾರ ಬೆಳಗ್ಗಿನವರೆಗೆ ನಿಷೇಧಾಜ್ಞೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಆದೇಶ ಜಾರಿಗೊಳಿಸಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಆದೇಶಿಸಿದ್ದಾರೆ. ಘರ್ಷಣೆ ವೇಳೆ ಬಿಜೆಪಿ ಮುಖಂಡ ಪ್ರಭಾಕರ್ ಪೂಜಾರಿ ಮೇಲೆ ಹಲ್ಲೆಯಾಗಿದೆ. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪೆÇಲೀಸ್ ವರಿಷ್ಠಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.ಈ ಸಂದರ್ಭ ಪೆÇೀಲೀಸರು ಲಾಠಿಚಾರ್ಜ್ ಕೂಡ ನಡೆಸಿದ್ದಾರೆ.

ತೈಲೋತ್ಪನ್ನ ಜಿಎಸ್‍ಟಿ ವ್ಯಾಪ್ತಿಗೆ ತರಲು ಆಗ್ರಹ

ನವದೆಹಲಿ, ಸೆ.10 : ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮುಂದುವರೆಸುವದಾಗಿ ಹೇಳಿದ ಕಾಂಗ್ರೆಸ್, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕು ಎಂದು ಸೋಮವಾರ ಆಗ್ರಹಿಸಿದೆ. ಭಾರತ್ ಬಂದ್ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಅವರು, ಇಂದು ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು. ತೈಲ ಬೆಲೆ ಏರಿಕೆ ಖಂಡಿಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಾವು ನೀಡಿದ್ದ ಭರವಸೆಯನ್ನು ಈಡೇರಿಸದಿರುವದರ ವಿರುದ್ಧ ಭಾರತ್ ಬಂದ್ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದಾಗ ವ್ಯಾಟ್ ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆಯನ್ನು ತಗ್ಗಿಸಲಾಗಿತ್ತು ಎಂದು ಗೊಹ್ಲೋಟ್ ತಿಳಿಸಿದ್ದಾರೆ. ತೈಲ ಬೆಲೆ ಏರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಪ್ರಶ್ನಿಸಿದ ಕಾಂಗ್ರೆಸ್ ನಾಯಕ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಚರ್ಚಿಸುತ್ತಾರೆ. ಆದರೆ ಜನಸಾಮಾನ್ಯರ ಕಷ್ಟಗಳ ಬಗ್ಗೆ ಯಾವುದೇ ಚರ್ಚೆ ಮಾಡುವದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಂದ್‍ಗೆ ಜಗ್ಗದ ಕೇಂದ್ರ ಸರಕಾರ

ದೆಹಲಿ, ಸೆ.10 : ಭಾರತ್ ಬಂದ್ ನ ಹೊರತಾಗಿಯೂ ಭಾರತ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವದಕ್ಕೆ ಅಬಕಾರಿ ಸುಂಕ ವಿಧಿಸುವದೂ ಒಂದು ಪ್ರಮುಖ ಕಾರಣವಾಗಿದ್ದು, ಭಾರತ್ ಬಂದ್ ನಂತರವಾದರೂ ರಾಜ್ಯ, ಕೇಂದ್ರ ಸರ್ಕಾರಗಳು ಅಬಕಾರಿ ಸುಂಕ ಕಡಿಮೆ ಮಾಡುವ ನಿರೀಕ್ಷೆ ಇತ್ತು. ಆದರೆ ಆಂಧ್ರಪ್ರದೇಶದ ಸರ್ಕಾರ ಹೊರತುಪಡಿಸಿ ಬೇರೆ ಸರ್ಕಾರಗಳು ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಬಕಾರಿ ಸುಂಕ ಕಡಿಮೆ ಮಾಡುವದರಿಂದ ಸರ್ಕಾರಕ್ಕೆ ಹೊರೆ ಹೆಚ್ಚಾಗಲಿದೆ ಈ ಹಿನ್ನೆಲೆಯಲ್ಲಿ ಸರ್ಕಾರಗಳು ಅಬಕಾರಿ ಸುಂಕ ಕಡಿಮೆ ಮಾಡಲು ಮುಂದಾಗುತ್ತಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

ಅವಳಿ ಸ್ಫೋಟ : ಉಗ್ರರಿಗೆ ಮರಣ ದಂಡನೆ

ಹೈದರಾಬಾದ್, ಸೆ.10 : ಹೈದರಾಬಾದ್ ಅವಳಿ ಸ್ಫೋಟ ಪ್ರಕರಣದಲ್ಲಿ, ನಿಷೇಧಿತ ಉಗ್ರ ಸಂಘಟನೆಯ ಇಬ್ಬರು ಉಗ್ರರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ದಿಲ್ ಸುಖ್ ನಗರದ ಸ್ಫೋಟ ಪ್ರಕರಣದ ಅಪರಾಧಿಗಳಾದ ಅನೀಕ್ ಶಫೀಕ್ ಸಯೀದ್ ಹಾಗೂ ಅಕ್ಬರ್ ಇಸ್ಮೈಲ್ ಚೌಧರಿಗೆ ವಿಶೇಷ ನ್ಯಾಯಲಯ ಮರಣ ದಂಡನೆ ವಿಧಿಸಿದೆ. ಮತ್ತೋರ್ವ ಅಪರಾಧಿ ಮೊಹಮ್ಮದ್ ತರೀಕ್ ಅಂಜುಮ್ ಅಹ್ಸಾನ್ ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಉಗ್ರರಿಗೆ ಆಶ್ರಯ ನೀಡಿದ್ದ. 2007 ರ ಆಗಸ್ಟ್ ನಲ್ಲಿ ಹೈದರಾಬಾದ್ ನಗೋಕುಲ್ ಚಾಟ್ ಭಂಡಾರ್ ಹಾಗೂ ಲುಂಬಿನಿ ಪಾರ್ಕ್ ನಲ್ಲಿ ನಡೆದಿದ್ದ ಸ್ಫೋಟದಲ್ಲಿ 43 ಜನ ಮೃತಪಟ್ಟಿದ್ದರು, 70 ಜನ ಗಾಯಗೊಂಡಿದ್ದರು. ಹೈದರಾಬಾದ್ ವಿಶೇಷ ನ್ಯಾಯಲಯದ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಆಪ್‍ನಿಂದ ಸಾರ್ವಜನಿಕ ಸೇವೆ ಮನೆ ಬಾಗಿಲಿಗೆ

ನವದೆಹಲಿ, ಸೆ.10 : ರಾಷ್ಟ್ರ ರಾಜಧಾನಿ ಜನರಿಗೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಐತಿಹಾಸಿಕ ಹೆಜ್ಜೆ ಹಾಗೂ ಕ್ರಾಂತಿಕಾರಿಕ ಬದಲಾವಣೆ ಎಂದೇ ಕರೆಯಲಾಗುತ್ತಿರುವ ಯೋಜನೆಗೆ ದೆಹಲಿಯಲ್ಲಿ ಇಂದು ಆಮ್ ಆದ್ಮಿ ಸರ್ಕಾರ ಚಾಲನೆ ನೀಡಿದೆ ದೆಹಲಿ ಸಚಿವಾಲಯದಲ್ಲಿ ಈ ಯೋಜನೆಗೆ ಇಂದು ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸರ್ಕಾರ ಕಚೇರಿಗಾಗಿ ಜನರು ಇನ್ನು ಮುಂದೆ ಸರದಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದರು. ಇದು ಆಡಳಿತ ಯುಗದ ಅಂತ್ಯವಾಗಿದ್ದು, ಹೊಸ ಯುಗ ಆರಂಭವಾಗಿದೆ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸೇವೆ ಮಾಡಲಾಗಿದೆ. ಪ್ರಾಮಾಣಿಕ ರೀತಿಯಲ್ಲಿ ಸರ್ಕಾರ ಸಾರ್ವಜನಿಕರ ಸೇವೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿದರು. ಇದೊಂದು ಕ್ರಾಂತಿಕಾರಿಕ ರೀತಿಯ ಬದಲಾವಣೆಯಾಗಿದೆ. ಕೇವಲ 1076 ಕರೆ ಮಾಡಿದ್ದರೆ ಅವರ ಬಯಸಿದ ಸೇವೆ ನೀಡಲಾಗುತ್ತದೆ. 50 ರೂಪಾಯಿ ಪಾವತಿಸಿದ್ದರೆ ಮನೆ ಬಾಗಿಲಲ್ಲೇ 40 ಸೇವೆ ಪಡೆಯಬಹುದು , ಯಾವುದೇ ಅಡ್ಡಿ ಇಲ್ಲದಂತೆ ಕೆಲಸವನ್ನು ತ್ವರಿತವಾಗಿ , ಸುಲಭವಾಗಿ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ಪೆಟ್ರೋಲ್, ಡೀಸೆಲ್ ಸೆಸ್ ಇಳಿಕೆಗೆ ಚಿಂತನೆ

ನವದೆಹಲಿ ಸೆ.10 : ಕೇಂದ್ರದ ತೈಲ ನೀತಿಯಿಂದಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ರಾಜ್ಯ ಸರ್ಕಾರದಿಂದ ಸೆಸ್ ಕಡಿಮೆ ಮಾಡುವ ಚಿಂತನೆ ಇದೆ. ನಮ್ಮ ಆರ್ಥಿಕ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದರು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮಲ್ಲಿ ದರ ಕಡಿಮೆಯಿದೆ. ಕೇಂದ್ರ ಸರ್ಕಾರದ ತೈಲ ನೀತಿಗಳ ಬದಲಾವಣೆಯಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದರು.