ಕೂಡಿಗೆ, ಸೆ. 10: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮೂಲಕ ಗೌರಿ-ಗಣೇಶೋತ್ಸವ ಹಬ್ಬದ ಅಂಗವಾಗಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಮುರುಳೀಧರ್ ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಡಿವೈಎಸ್‍ಪಿ ಮುರುಳೀಧರ್ ಮಾತನಾಡಿ, ಗೌರಿ-ಗಣೇಶೋತ್ಸವದ ಪ್ರತಿಷ್ಠಾಪನೆಯ ಸಂದರ್ಭ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮದ ಬಗ್ಗೆ, ಸಂಚಾರಿ ನಿಯಮ ಹಾಗೂ ಸಂಘ-ಸಂಸ್ಥೆಗಳು ಸ್ವಯಂ ಸೇವಕರನ್ನು ನೇಮಕ ಮಾಡಿ, ಅವರಿಗೆ ಜವಬ್ದಾರಿ ವಹಿಸಿ, ಬೆಳಗ್ಗಿನಿಂದ ಸಂಜೆಯವರೆಗೆ ಜವಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ, ಕುಶಾಲನಗರ ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್, ಗಣೇಶೋತ್ಸವ ಸೇವಾ ಸಮಿತಿ, ಸಂಘ-ಸಂಸ್ಥೆಗಳ ನೂರಾರು ಪದಾಧಿಕಾರಿಗಳು ಇದ್ದರು.