ಮಡಿಕೇರಿ, ಸೆ. 10: ಅಮ್ಮತ್ತಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದ ಶ್ರೀ ಗೌರಿ-ಗಣೇಶೋತ್ಸವವನ್ನು ಈ ಬಾರಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ನಡೆದುದರಿಂದ ಸರಳವಾಗಿ ಆಚರಿಸಲಾಗುವದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಮಾಚಿಮಂಡ ಮಧು ಮಾದಪ್ಪ ತಿಳಿಸಿದ್ದಾರೆ.
ಉತ್ಸವದ ಪ್ರಯುಕ್ತ ತಾ. 12ರಂದು ಬೆಳಿಗ್ಗೆ 9 ಗಂಟೆಗೆ ಸ್ವರ್ಣ ಗೌರಿಯ ಆಗಮನ, ತಾ. 13ರಂದು ಬೆಳಿಗ್ಗೆ 5.30 ಗಂಟೆಗೆ ಗಣಪತಿ ಹೋಮ ಮತ್ತು ಶ್ರೀ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದ್ದು, ತಾ. 14ರಿಂದ 21ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಭಕ್ತಾದಿಗಳಿಂದ ಅಲಂಕಾರ ಪೂಜೆ ನಡೆಯಲಿದೆ. ತಾ. 22ರಂದು ಪೂರ್ವಾಹ್ನ 10 ಗಂಟೆಗೆ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಅಮ್ಮತ್ತಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮದ್ರೀರ ಗಣೇಶ್ ಅವರ ಕೆರೆಯಲ್ಲಿ ವಿಸರ್ಜಿಸಲಾಗುವದು.
ಸಂತ್ರಸ್ತರಿಗೆ ಪರಿಹಾರ
ಜಿಲ್ಲೆಯಲ್ಲಿ ಈ ಬಾರಿ ನಡೆದ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ನೈಜ ಸಂತ್ರಸ್ತರನ್ನು ಗುರುತಿಸಿ ಉತ್ಸವದ ಉಳಿಕೆ ಹಣವನ್ನು ಅರ್ಹರಿಗೆ ಪರಿಹಾರವಾಗಿ ನೀಡಲಾಗುವದು ಎಂದು ಮಧು ಮಾದಪ್ಪ ತಿಳಿಸಿದ್ದಾರೆ.