ಕುಶಾಲನಗರ, ಸೆ. 9: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡಲು ನೆರೆಯ ಜಿಲ್ಲೆಗಳಿಂದ ಅಧಿಕಾರಿಗಳ ದಂಡಿನೊಂದಿಗೆ ಕಾಲೇಜು ವಿದ್ಯಾರ್ಥಿಗಳ ತಂಡ ಕಳೆದ ಕೆಲವು ದಿನಗಳಿಂದ ನಿರಂತರ ಸೇವೆಯಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ.

ಕುಶಾಲನಗರದ ಸಂತ್ರಸ್ತ ಕೇಂದ್ರ ವಾಲ್ಮೀಕಿ ಭವನದಲ್ಲಿರುವ 400 ಕ್ಕೂ ಅಧಿಕ ಸಂತ್ರಸ್ತರಿಗೆ ವಿವಿಧೆಡೆಗಳಿಂದ ಬರುತ್ತಿರುವ ಪರಿಹಾರ ಸಾಮಗ್ರಿಗಳ ಸಂಗ್ರಹ, ವಿತರಣೆ, ನಿರ್ವಹಣೆಗೆಂದು ಕಾರವಾರ ಜಿಲ್ಲೆಯಿಂದ ಸರಕಾರಿ ಅಧಿಕಾರಿಗಳ ತಂಡವೊಂದು ಆಗಮಿಸಿದ್ದು ಅಚ್ಚುಕಟ್ಟಾದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಕಾರವಾರದ ಮೂವರು ಉಪವಿಭಾಗಾಧಿಕಾರಿಗಳು, ಐವರು ತಹಶೀಲ್ದಾರರು ಸೇರಿದಂತೆ ಸ್ಥಳೀಯ ಅಧಿಕಾರಿಗಳ ತಂಡ ಹಗಲು ರಾತ್ರಿ ಎನ್ನದೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಿರುವದು ಕಾಣಬಹುದು. ಸಂತ್ರಸ್ತರ ಕೇಂದ್ರದಲ್ಲಿ ಉಸ್ತುವಾರಿ ಹೊತ್ತಿರುವ ಪ್ರೊಬೆಷನರಿ ಉಪವಿಭಾಗಾಧಿಕಾರಿ ಬಿನಾಯ್ ನೇತೃತ್ವದಲ್ಲಿ ತಹಶೀಲ್ದಾರ್ ಹುದ್ದೆಯ ದುಂಡಪ್ಪ, ಸೋಮವಾರಪೇಟೆ ತಹಶೀಲ್ದಾರ್ ಮಹೇಶ್, ಕಂದಾಯಾ ಧಿಕಾರಿ ಮಧುಸೂದನ್, ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಕೇಂದ್ರದ ನೋಡೆಲ್ ಅಧಿಕಾರಿ ಫಿಲಿಪ್ ಅವರುಗಳು ಸಮರ್ಪಕ ಸೇವೆಯಲ್ಲಿ ತೊಡಗಿರುವದು ಕಂಡುಬಂದಿದೆ. ಕುಶಾಲನಗರದ ಆರ್‍ಎಂಸಿ ಗೋದಾಮಿಗೆ ದಿನನಿತ್ಯ ಹಲವೆಡೆಗಳಿಂದ ಲಾರಿಗಟ್ಟಲೆ ಆಹಾರ ಸಾಮಗ್ರಿಗಳು, ಬಟ್ಟೆ ಬರೆಗಳು ಸರಬರಾಜಾಗುತ್ತಿದ್ದು ಇದನ್ನು ಸಂಗ್ರಹಿಸಿ ಪರಿಹಾರ ಕೇಂದ್ರಗಳಿಗೆ ಕಳುಹಿಸುವ ಕಾರ್ಯದಲ್ಲಿ ಕಾರವಾರ ಜಿಲ್ಲೆಯ ಪ್ರೊಬೆಷನರಿ ಅಧಿಕಾರಿಗಳಾದ ಅಜಯ್, ಜಯಲಕ್ಷ್ಮಿ, ಆಶಪ್ಪ, ಮಂಜುನಾಥ್, ಕಿಶನ್, ಶಂಕರ್ ಅವರುಗಳು ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಅಲ್ಲಿನ ಶೇ. 80 ರಷ್ಟು ಹಿರಿಯ ಹುದ್ದೆಯ ಅಧಿಕಾರಿಗಳನ್ನು ಜಿಲ್ಲೆಯ ಸಂತ್ರಸ್ತರ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

ಕೇಂದ್ರಕ್ಕೆ ಲಾರಿಗಳಲ್ಲಿ ಬರುವ ಸಾಮಗ್ರಿಗಳನ್ನು ಸ್ವತಃ ಅಧಿಕಾರಿಗಳೇ ಇಳಿಸಿ ಕೇಂದ್ರದಲ್ಲಿ ದಾಸ್ತಾನು ಮಾಡುತ್ತಿರುವ ದೃಶ್ಯ ನಿಜಕ್ಕೂ ಶ್ಲಾಘನೀಯ. ಯಾವದೇ ಸಾಮಗ್ರಿಗಳು ದುರುಪಯೋಗವಾಗದಂತೆ ಈ ಅಧಿಕಾರಿಗಳು ಹಗಲಿರುಳು ಕಟ್ಟೆಚ್ಚರ ವಹಿಸುತ್ತಿದ್ದು ಸ್ಥಳೀಯ ಅಧಿಕಾರಿಗಳ ಸಲಹೆ ಸೂಚನೆಯಂತೆ ಕಾರ್ಯ ನಿರ್ವಹಿಸುವದರೊಂದಿಗೆ ಸಾಂತ್ವನ ಕೇಂದ್ರದಲ್ಲಿರುವ ಸಂತ್ರಸ್ತರ ಅಗತ್ಯತೆಗಳನ್ನು ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಕೂಡ ಸಂತ್ರಸ್ತರ ಸಹಾಯಕ್ಕೆ ಬಂದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ 55ಕ್ಕೂ ಅಧಿಕ ಎನ್‍ಸಿಸಿ, ಎನ್ನೆಸ್ಸೆಸ್ ಕೆಡೆಟ್‍ಗಳು ಕಳೆದ 4 ದಿನಗಳಿಂದ ಎರಡು ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನ ಎನ್‍ಸಿಸಿ ಅಧಿಕಾರಿ ಶಾಂತ ಮರಿಯ, ಗೋವಿಂದೇಗೌಡ ಅವರ ನೇತೃತ್ವದಲ್ಲಿ ದಿನ ರಾತ್ರಿ ಎನ್ನದೆ ಸಂತ್ರಸ್ತರಿಗೆ ಅವಶ್ಯವಿರುವ ಸಾಮಾನು, ಸರಂಜಾಮುಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.