ಮಡಿಕೇರಿ, ಸೆ. 9: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ತಾ. 10 ರಂದು (ಇಂದು) ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ದೇಶದಾದ್ಯಂತ ಬಂದ್‍ಗೆ ಕರೆ ನೀಡಿದೆ.ಬಂದ್ ಕರೆ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಳ್ಳಲಿದೆ. ಬಂದ್‍ಗೆ ಬೆಂಬಲ ನೀಡಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟ ಸೂಚನೆ ನೀಡಿದ್ದು, (ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವದಾಗಿ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಬಂದ್ ಕರೆ ಕುರಿತಂತೆ ‘ಶಕ್ತಿ’ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಬಳಿ ಮಾಹಿತಿ ಬಯಸಿದಾಗ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಖಾಸಗಿ ಬಸ್‍ಗಳ ಸಂಚಾರವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯದ ಕೆಲಸಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆಯಾಗುವದನ್ನು ತಪ್ಪಿಸಲು ಹೆಚ್ಚುವರಿ ಸರಕಾರಿ ಬಸ್‍ಗಳನ್ನು ಕಲ್ಪಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಡಿಪೋ ವ್ಯವಸ್ಥಾಪಕಿ ಗೀತಾ ಅವರು, ಭಾರತ್ ಬಂದ್ ಕರೆಗೆ ಬೆಂಬಲ ನೀಡಲು ಕಾರ್ಮಿಕ ಸಂಘಟನೆಗಳು ರಾಜ್ಯಮಟ್ಟದಲ್ಲಿ ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ತಾ. 10 ರಂದು (ಇಂದು) ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾದಲ್ಲಿ ಮಾತ್ರ ಸರಕಾರಿ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.