ವೀರಾಜಪೇಟೆ, ಸೆ. 8: ವೀರಾಜಪೇಟೆ ಪಟ್ಟಣದ ಸುತ್ತಮುತ್ತ ಗ್ರಾಮಗಳಿಗೆ ಅನುಕೂಲವಾಗುವಂತೆ ಸಾರಿಗೆ ಇಲಾಖೆ ಪ್ರತಿ ತಿಂಗಳು 4 ಮತ್ತು 16 ರಂದು ಇಲ್ಲಿನ ಛತ್ರಕೆರೆ ಬಳಿಯ ಖಾಲಿ ಜಾಗದಲ್ಲಿ ವಾಹನಗಳ ದಾಖಲೆಗಳ ತಪಾಸಣಾ, ವಾಹನಗಳ ಫಿಟ್‍ನೆಸ್ ದೃಢೀಕರಣ ಹಾಗೂ ವಾಹನಗಳಿಗೆ ಸಂಬಂಧಿಸಿದಂತೆ ಇತರ ಕಾರ್ಯವನ್ನು ಮಾಡುತ್ತಿದ್ದು, ಈ ಕಾರ್ಯದಿಂದ ಛತ್ರಕೆರೆಯಿಂದ ಹಾದು ಹೋಗುವ ವಾಹನಗಳಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಆರ್ಜಿ ಗ್ರಾಮದ ಬೊಳ್ಯಪಂಡ ಬೋಪಣ್ಣ ದೂರಿದ್ದಾರೆ.
ತಿಂಗಳಿಗೆ ಎರಡು ಬಾರಿ ಛತ್ರಕೆರೆಯ ಬಳಿ ವಾಹನ ತಪಾಸಣೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಛತ್ರಕೆರೆ ಪಕ್ಕದ ಮುಖ್ಯ ರಸ್ತೆಯ ಎರಡು ಕಡೆಗಳಲ್ಲಿ ವಾಹನ ಪಾರ್ಕಿಂಗ್ ಮಾಡಿಕೊಂಡು ಉಳಿದ ವಾಹನಗಳಿಗೆ ತೊಂದರೆ ನೀಡುವದು ಇತರ ವಾಹನಗಳಿಗೆ ಅನಾನುಕೂಲವಾಗುತ್ತಿದೆ.
ಛತ್ರಕೆರೆಯ ಸುತ್ತಮುತ್ತ ಸರಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿದ್ದು, ಇದರಿಂದ ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಇದೇ ರಸ್ತೆಗಾಗಿ ಹಲವಾರು ಶಾಲಾ ವಾಹನಗಳು ಸಾಗುತ್ತಿದ್ದು, ಟ್ರಾಫಿಕ್ ಜಾಮ್‍ನಿಂದಾಗಿ ಇತರ ಶಾಲೆಗಳಿಗೆ ಸರಿಯಾದ ಸಮಯದಲ್ಲಿ ವಾಹನ ತಲಪಲು ಸಾಧ್ಯವಾಗುತ್ತಿಲ್ಲ ಎಂದು ಬೋಪಣ್ಣ ಆಕ್ಷೇಪ ವ್ಯಕ್ತಪಡಿಸಿದರು.