ಶನಿವಾರಸಂತೆ, ಸೆ. 8: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಲಭ್ಯವಿರುವ ಬಂಡವಾಳವನ್ನು ವ್ಯಾಪಾರಕ್ಕೆ ಹಾಗೂ ಅಭಿವೃದ್ಧಿಗೆ ವಿನಿಯೋಗಿಸಿ ಕೊಂಡು ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದ್ರಿ ಸಾಲಿನಲ್ಲಿ ಸಂಘವು ರೂ. 12,95,011 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಸಂಘದ 2017-2018ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಕಚೇರಿಯ ಹಿಂಬದಿ ನೂತನವಾಗಿ ರೂ. 7.25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಗೋದಾಮನ್ನು ಉದ್ಘಾಟಿಸಿದ ಅಧ್ಯಕ್ಷರು ಮಾತನಾಡಿ, ತನ್ನಲ್ಲಿದ್ದ ಹಳೆಯ ಸಾಲಗಳನ್ನು ತೀರುವಳಿ ಮಾಡಿ ಸಂಘ ಸ್ವಂತ ಬಂಡ ವಾಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆ.ಡಿ.ಸಿ.ಸಿ. ಬ್ಯಾಂಕ್ ಮಡಿಕೇರಿಯಿಂದ ಜಿಲ್ಲೆಗೆ ಅಗ್ರಸ್ಥಾನ ನೀಡಿ ಗೌರವಿಸಿದೆ. ಸಂಘವು ಅಭಿವೃದ್ಧಿಗೊಂಡು ಪ್ರಗತಿಯತ್ತ ಸಾಗಲು ಸದಸ್ಯರುಗಳು, ನೌಕರರುಗಳ ಪೂರ್ಣ ಸಹಕಾರವೆ ಕಾರಣ ಎಂದರು.

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಮಳೆಯಿಂದ ಸಂತ್ರಸ್ತರಾದ ಜನರಿಗೆ ಸಹಾಯದ ರೂಪದಲ್ಲಿ ಸಂಘದ ವತಿಯಿಂದ ರೂ. 10 ಸಾವಿರ ನೀಡುವಂತೆ ತೀರ್ಮಾನಿಸಲಾಯಿತು. ಮಹಾಸಭೆಯಲ್ಲಿ ಸದಸ್ಯರುಗಳಾದ ಲಕ್ಷ್ಮಣ, ಆನಂದ, ಉಮಾಶಂಕರ್, ಮಲ್ಲಪ್ಪ, ದೊಡ್ಡಪ್ಪ, ಪ್ರೇಮ್ ಕುಮಾರ್, ಮಹಮ್ಮದ್ ಗೌಸ್ ಹಾಗೂ ಇತರರು ಪಾಲ್ಗೊಂಡಿದ್ದರು. ನಿಧನರಾದ ಸಂಘದ ಸದಸ್ಯರಿಗೆ ಹಾಗೂ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು.

ಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಹೆಚ್.ಸಿ. ದೀಪಕ್, ನಿರ್ದೇಶಕರುಗಳಾದ ಗಿರಿಜಾ ಕರುಣಾಕರ್, ದೇವಾಂಬಿಕ ಮಹೇಶ್ ಎಸ್.ಸಿ. ಶರತ್ ಶೇಖರ್, ಹೆಚ್.ವಿ. ಮಹಾಂತಪ್ಪ, ಜಿ.ಜಿ. ಪರಮೇಶ್, ಬಿ.ಎಸ್. ಮಂಜುನಾಥ, ಓ.ವಿ. ಶುಕ್ಲಾಂಬರ, ಹೆಚ್.ಪಿ. ರಾಜು, ಹೆಚ್.ಎಸ್. ಸುಬ್ಬಪ್ಪ, ಎಸ್.ಜೆ. ರವಿಕುಮಾರ್ ಉಪಸ್ಥಿತರಿದ್ದರು. ಸಂಘದ ವ್ಯವಸ್ಥಾಪಕರಾದ ಎನ್.ಪಿ. ಶಿವರಾಜು ಆಡಳಿತ ಮಂಡಳಿಯ ವರದಿ ಮಂಡಿಸಿ, ಶರತ್ ಶೇಖರ್ ಸ್ವಾಗತಿಸಿ, ಶುಕ್ಲಾಂಬರ ವಂದಿಸಿದರು.