ಮಡಿಕೇರಿ, ಸೆ. 8: ಕೊಡಗು ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವು ಪರಿಹಾರ ನೀಡುವ ನಿಟ್ಟಿನಲ್ಲಿ ಭಾರತೀಯ ವಿದ್ಯಾಭವನ ಬೆಂಗಳೂರು, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ತಾ. 10ರಂದು (ನಾಳೆ) ಮಡಿಕೇರಿಯಲ್ಲಿ ಕೊಳಲು ವಾದನ ಆಯೋಜಿಸಲಾಗಿದೆ.

ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸೋಮವಾರ ಸಂಜೆ 6.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೊಡಗು ಮೂಲದವರೇ ಆದ ಹೆಸರಾಂತ ಕೊಳಲು ವಾದಕರಾದ ಹೇಮಂತ - ಹೇರಂಭ ಸಹೋದರರಿಂದ ಕೊಳಲು ವಾದನ ಕಾರ್ಯಕ್ರಮ ಆಯೋಜಿಸಲಾಗಿದೆ. ವಯೋಲಿನ್‍ನಲ್ಲಿ ವೈಭವ್ ರಮಣಿ, ಮೃದಂಗದಲ್ಲಿ ಬಿ.ಎಸ್. ಪ್ರಶಾಂತ್, ಮೋರ್ಸಿಂಗ್‍ನಲ್ಲಿ ಚಿದಾನಂದ ಕಾರ್ಯಕ್ರಮ ನೀಡುತ್ತಿದ್ದಾರೆ. ಕೊಳಲು ವಾದನದಲ್ಲಿ ದಾನಿಗಳಿಂದ ಲಭಿಸುವ ಹಣವನ್ನು ಕೊಡಗಿನ ನಿರಾಶ್ರಿತರಿಗೆ ಮನೆ ನಿರ್ಮಿಸಲು ಬಳಸಲು ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಫೌಂಡೇಷನ್ ನಿರ್ಧರಿಸಿದೆ.