ಮಡಿಕೇರಿ, ಸೆ. 8: ಅಂದಾಜು ಆರುನೂರು ವರ್ಷಗಳ ಆಳ್ವಿಕೆಯ ಇತಿಹಾಸವಿರುವ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆಯಲ್ಲಿರುವ ಅರಮನೆ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಡಿಕೇರಿಯ ಐತಿಹಾಸಿಕ ಕೋಟೆ ಅಥವಾ ಅರಮನೆಯು ಕೊಡಗನ್ನು ಆಳಿದ ಹಾಲೇರಿ ರಾಜವಂಶಜರಿಗೆ ಸೇರಿದ್ದು ಎನ್ನುವದು ಬಹುತೇಕ ಜನಾಭಿಪ್ರಾಯವಾಗಿದೆ.ಹೀಗಿದ್ದು ಒಂದೊಮ್ಮೆ ಈ ಕೋಟೆಯನ್ನು ಮೈಸೂರಿನ ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ವಶಕ್ಕೆ ಪಡೆದಿದ್ದ ಇತಿಹಾಸವಿದೆ. ಅನಂತರದಲ್ಲಿ ಬಹಳಷ್ಟು ವರ್ಷಗಳು ಈ ಕೋಟೆ ಮತ್ತೆಕೊಡಗು ರಾಜರಾಗಿದ್ದ ಇದೇ ಹಾಲೇರಿ ವಂಶಜರ ವಶದಲ್ಲಿದ್ದು, ಮತ್ತೆ ಬ್ರಿಟಿಷ್ ಆಳ್ವಿಕೆಗೆ ಒಳಗಾಗಿತ್ತು. (ಮೊದಲ ಪುಟದಿಂದ) ಸ್ವಾತಂತ್ರ್ಯ ಪೂರ್ವದಲ್ಲಿ ನೂರಾರು ವರುಷ ಬ್ರಿಟಿಷ್ ಆಳ್ವಿಕೆಯು ಕೊನೆಗೊಂಡು 1947ರ ಆಗಸ್ಟ್ 14ರ ಮಧ್ಯರಾತ್ರಿ ಬಳಿಕ ಬ್ರಟಿಷರು ದೇಶಬಿಟ್ಟು ತೆರಳುವದರೊಂದಿಗೆ ಚುನಾಯಿತ ಜನ ಪ್ರತಿನಿಧಿಗಳ ಆಳ್ವಿಕೆÀಗೆ ಭಾರತ ಗಣತಂತ್ರ ವ್ಯವಸ್ಥೆ ಒಳಗಾಯಿತು. ಅಂತೂ ಸ್ವಾತಂತ್ರ್ಯ ಬಂದು ದೇಶ ಏಳು ದಶಕಗಳನ್ನು ಕಂಡಿದೆ.

ಈ ಏಳು ದಶಕಗಳಲ್ಲಿ ಒಂದಿಷ್ಟು ಕಾಲ ಸ್ವತಂತ್ರ ಕೊಡಗು ಸರಕಾರ ಆಡಳಿತ ನಡೆಸುವದರೊಂದಿಗೆ ಪ್ರತ್ಯೇಕ ಕೊಡಗು ಸೀಮೆಯ ಅಖಂಡ ಕರ್ನಾಟಕದೊಂದಿಗೆ ವಿಲೀನಗೊಂಡಿತ್ತು. ಆ ಕಾರಣದಿಂದಲೇ ಕೊಡಗು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಸಹಿತ 32ಕ್ಕೂ ಅಧಿಕ ಸರಕಾರಿ ಇಲಾಖೆಗಳ ಕಚೇರಿಗಳು ಈ ಕೋಟೆ ಆವರಣದಲ್ಲಿ ಇತ್ತೀಚಿನ ವರ್ಷದವರೆಗೂ ನೆಲೆ ಕಂಡುಕೊಂಡಿತು.

ಈಗಷ್ಟೆ ನಾಲ್ಕೈದು ವರ್ಷಗಳಲ್ಲಿ ನೂತನ ಆಡಳಿತ ಭವನ ತಲೆಯೆತ್ತುವದರೊಂದಿಗೆ ಈ ಕೋಟೆಯಲ್ಲಿದ್ದ ಜಿಲ್ಲಾಧಿಕಾರಿ ಕಚೇರಿ ಸಹಿತ ಬಹುತೇಕ (32 ಇಲಾಖೆಗಳು) ಇಲಾಖಾ ಕಚೇರಿಗಳು ಕೋಟೆಯಿಂದ ನೂತನ ಆಡಳಿತ ಭವನಕ್ಕೆ ಸ್ಥಳಾಂತರಗೊಂಡಿವೆ. ಈ ಸುಧೀರ್ಘ ಆಳ್ವಿಕೆಯ ಅವಧಿಯಲ್ಲೂ ಕೋಟೆಗೆ ಕಾಯಕಲ್ಪ ಲಭಿಸದೆ ಇಡೀ ಅರಮನೆ ಶಿಥಿಲಗೊಂಡು ಭಾಗಶಃ ಅಲ್ಲಲ್ಲಿ ಕಳಚಿ ಬೀಳುತ್ತಿದೆ.

ಇಲಾಖೆಯಿಂದ ಕ್ರಮ : ಈ ಬೆಳವಣಿಗೆ ನಡುವೆ ಕಳೆದೆರಡು ದಶಕಗಳಿಂದ ಕೋಟೆಯಲ್ಲಿರುವ ಬಹುತೇಕ ಕಚೇರಿಗಳ ಸ್ಥಳಾಂತರಕ್ಕೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯು ನೋಟೀಸ್ ಜಾರಿಗೊಳಿಸಿ ಮೇಲಿಂದ ಮೇಲೆ ತೆರವುಗೊಳಿಸಲು ಆಗ್ರಹಿಸುತ್ತಲೇ ಬಂದಿದೆ.

ಪರಿಣಾಮವೆಂಬಂತೆ ಇಂದಿಷ್ಟು ಇಲಾಖೆಗಳು ಸ್ಥಳಾಂತರಗೊಂಡಿದ್ದರೂ, ಮುಖ್ಯವಾಗಿ ಕೊಡಗು ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ಭೂಮಾಪನ ಇಲಾಖೆ, ಕೃಷಿ ಇಲಾಖೆ, ನ್ಯಾಯಾಲಯ ಸಂಕೀರ್ಣ ಇತ್ಯಾದಿ ಇದೇ ಕೋಟೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶೇಷವೆಂದರೆ ನಮ್ಮ ವಿಧಾನಸಭೆ ಹಾಗೂ ವಿಧಾನಪರಿಷತ್ ಪ್ರತಿನಿಧಿಗಳ ಸಹಿತ ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರು ಈ ಕೋಟೆಯಲ್ಲೇ ಕಚೇರಿಗಳನ್ನು ಹೊಂದಿದ್ದಾರೆ.

ಕಾಮಗಾರಿಗೆ ಅವಕಾಶವಿಲ್ಲ : ಈ ಕೋಟೆಯ ಪರಿಸರದಿಂದ 200 ಮೀಟರ್ ಪರಿದಿಯಲ್ಲಿ ಯಾವದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಕೋಟೆಯ ಮೂಲ ಸ್ವರೂಪಕ್ಕೆ ಹಾನಿ ಉಂಟು ಮಾಡುವಂತಿಲ್ಲ. ಕೋಟೆಯ ಪರಿಸರದಲ್ಲಿ ಯಾವದೇ ಕಾನೂನು ಉಲ್ಲಂಘನೆಯಾಗುವಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲ. ಇದು ಸೂಕ್ಷ್ಮ ಹಾಗೂ ಸಂರಕ್ಷಿತ ಪ್ರದೇಶವೆಂಬ ಕಾನೂನಾತ್ಮಕ ಷರತ್ತುಗಳಿವೆ.

ಹೀಗಿದ್ದೂ ಕೋಟೆಯ ಸುತ್ತಲೂ ಕೇವಲ ನೂರಾರು ಅಡಿಗಳ ಅಂತರದಲ್ಲಿ ಅನೇಕ ಕಟ್ಟಡಗಳು, ಮನೆಗಳು ಇತ್ಯಾದಿ ತಲೆಯೆತ್ತಿದ್ದು, ಇಲಾಖೆಯಿಂದ ನೂರಾರು ನೋಟೀಸ್‍ಗಳು ಜಾರಿಗೊಂಡು ಕೇಂದ್ರ ಪ್ರಾಚ್ಯವಸ್ತು ಇಲಾಖೆ ಆಕ್ಷೇಪಿಸಿರುವದು ದಾಖಲೆಗಳಲ್ಲಿ ಲಭಿಸಲಿವೆ.

ಕೋಟೆ ಆವರಣದೊಳಗೆ ತೀರಾ ಇತ್ತೀಚೆಗೆ ಹುತಾತ್ಮರೊಬ್ಬರ ಹೆಸರಿನಲ್ಲಿ ಶಿಲಾಫಲಕ ಅನಾವರಣಗೊಳಿಸಿರುವ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಇನ್ನೊಂದೆಡೆ ಈ ಕೋಟೆಯನ್ನು ರಕ್ಷಿಸುವಂತೆ ನಿವೃತ್ತ ಅಧಿಕಾರಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇನ್ನು ಮೈಸೂರಿನ ವರ್ತಕರೊಬ್ಬರು ಈ ಕೋಟೆ ತನ್ನ ಪೂರ್ವಜರಿಗೆ ಸೇರಿದ್ದೆಂದು ಹಕ್ಕು ಮಂಡಿಸಿ ಪ್ರತ್ಯೇಕ ಮೊಕದ್ದಮೆ ಹೂಡಿದ್ದಾರೆ.

ಅಚ್ಚರಿಯ ಅಂಶ ಬೆಳಕಿಗೆ : ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕೋಟೆಯ ಮೂಲ ದಾಖಲೆಗಳ ಪರಿಶೀಲನೆಗೆ ಪ್ರಯತ್ನಿಸಿದಾಗ, ಪ್ರಸಕ್ತ ಮಡಿಕೇರಿ ಕೋಟೆಯು ‘ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 521ರಲ್ಲಿ 9.13 ಎಕರೆ ಜಾಗದಿಂದ ಕೂಡಿದ್ದಾಗಿದೆ ಎಂದು ‘ಶಕ್ತಿ’ಗೆ ಅಧಿಕೃತ ಮೂಲಗಳಿಂದ ಗೊತ್ತಾಗಿದೆ.

ಅಲ್ಲದೆ, ನಿತ್ಯ ಪ್ರವಾಸಿಗರು ಸೇರಿದಂತೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಬರುವವರು, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದಂತೆ ಈ ಅಪಾಯಕಾರಿ ಕಟ್ಟಡದ ನಡುವೆ ಸುಳಿದಾಡುತ್ತಿದ್ದು, ಕೋಟೆ ಸುರಕ್ಷಿತವಾಗಿ ಉಳಿದಿಲ್ಲವೆಂಬ ಆತಂಕ ವ್ಯಕ್ತಗೊಳ್ಳತೊಡಗಿದೆ. ಇಂತಹ ಸುಧೀರ್ಘ ಇತಿಹಾಸವಿರುವ ಕೋಟೆಗೆ ದಾಖಲೆಗಳ ಪ್ರಕಾರ ವಾರಿಸುದಾರರು ಮಾತ್ರ ಬ್ರಿಟಿಷರೇ ಆಗಿದ್ದಾರೆ.

-ಶ್ರೀಸುತ