*ಗೋಣಿಕೊಪ್ಪ, ಸೆ. 8: ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸ್ಕ್ವಾಷ್, ಜಾಮ್, ಸ್ಲೈಸ್, ಟಿಟ್‍ಬಿಟ್ಸ್ ಉತ್ಪಾದನಾ ಮಾರಾಟವು 26 ಲಕ್ಷಗಳಷ್ಟಾಗಿದ್ದು, 5,13,189 ರೂಪಾಯಿ ವ್ಯಾಪಾರ ಲಾಭ ಗಳಿಸಿದೆ. ಮುಂದಿನ ವರ್ಷದಲ್ಲಿ 20 ಲಕ್ಷ ವ್ಯಾಪಾರ ಲಾಭಗಳಿಸುವ ನಿರೀಕ್ಷೆಯಿದೆ ಎಂದು ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾಹಿತಿ ನೀಡಿದರು.

ಸಂಘದ ಸಭಾಂಗಣದಲ್ಲಿ ನಡೆದ 17-18ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು.

ಸಂಘವು 2 ಲಕ್ಷ ಕೆ.ಜಿ. ಎಲೋಪಿನ ಹಸಿಮೆಣಸನ್ನು ಸಿಸ್‍ಲಾಂಗ್ ಟ್ರೇಡರ್ಸ್ ಕಂಪನಿಗೆ ಯಾವದೆ ವೆಚ್ಚವಿಲ್ಲದೆ 50,19,300 ರೂಪಾಯಿಗಳ ವಹಿವಾಟು ನಡೆಸಿ 7 ಲಕ್ಷ ನೇರ ಲಾಭ ಗೊಳಿಸಿದೆ. 78 ಸಾವಿರ ಕೆ.ಜಿ. ಎಲೋಪಿನ ಹಸಿಮೆಣಸನ್ನು ಸಂಘದ ಘಟಕದಲ್ಲಿ ವಿನಿಗರ್ ಹಾಗೂ ಉಪ್ಪಿನ ಮಿಡಿಯಾಗಿ ಸಂಗ್ರಹಿಸಿದೆ; ಇದನ್ನು ಸ್ಪೈಸ್‍ಗಳಾಗಿ ಪರಿವರ್ತಿಸಿ 25,000 ಕೆ.ಜಿ.ಗಳನ್ನು ಬೆಂಗಳೂರಿನ ಇಂಡಿಯನ್ ಆಗ್ರೋ ಕಂಪೆನಿಗೆ 15 ಲಕ್ಷಗಳಿಗೆ ಮಾರಾಟ ಮಾಡಲಾಗಿದೆ. ಉಳಿದ ಎಲೋಪಿನವನ್ನು ಸ್ಪೈಸ್‍ಗಳಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದ್ದು, 35 ಲಕ್ಷ ಮೌಲ್ಯದ ದಾಸ್ತಾನು ನೀಡಲಾಗಿದೆ. ಈ ಮೂಲಕ ಸುಮಾರು 10 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಹಣ್ಣಿನ ಮಂಡಿಯಲ್ಲಿ 1 ಕೋಟಿ 10 ಲಕ್ಷ, ಸಿಂಗನ ಅಗ್ರಹಾರ ಎ.ಪಿ.ಎಂ.ಸಿ. ಯಾರ್ಡ್‍ನಲ್ಲಿ 60 ಲಕ್ಷಗಳಷ್ಟು ವ್ಯಾಪಾರ ನಡೆಸಿದ್ದು, 6 ಲಕ್ಷ ಆದಾಯ ಗಳಿಸಿಕೊಂಡಿದೆ ಎಂದು ಹೇಳಿದರು.

ಸಂಘದ ಉತ್ಪನ್ನಗಳ ಮಾರಾಟದ ವ್ಯವಸ್ಥೆಗಳನ್ನು ಅಧಿಕಗೊಳಿಸಲು ಬೆಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್ ಕಡೆಗಳಲ್ಲಿ ಮಾರಾಟ ಮತ್ತು ಉತ್ಪದನಾ ವ್ಯವಸ್ಥಾಪಕರನ್ನು ನೇಮಕ ಮಾಡಲಾಗಿದೆ ಎಂದರು.

ಸಂಘದ ಉತ್ಪನ್ನಗಳ ಜೊತೆಗೆ ಮಡಿಕೇರಿಯ ಕೂರ್ಗ್ ಕನ್‍ಸೋಲಿ ಡೇಟೆಡ್ ಕಮೋಡಿಟಿ ಐನ್‍ಮನೆ ಹಾಗೂ ಪತಾಯ ಕೂರ್ಗ್ ಸ್ಟೋರ್ ಬ್ರಾಂಡ್‍ನಲ್ಲಿ ವಿವಿಧ ರೀತಿಯ ಜೇನು, ನೆಲ್ಲಿಕಾಯಿ, ಕೈಹುಳಿ, ಬಿಟ್‍ರೂಟ್, ಕಣಿಲೆ, ಉಪ್ಪಿನಕಾಯಿಗಳನ್ನು ತಯಾರಿಸಿ ಮಾರಾಟ ಮಾಡಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ಸಹಕಾರ ಇಲಾಖೆಯ ಕಟ್ಟಡದಲ್ಲಿ 15x10 ಅಡಿಯಲ್ಲಿ ಮಳಿಗೆಯನ್ನು ಪಡೆದುಕೊಂಡಿದೆ. ಸಿಂಗನ ಅಗ್ರಹಾರ ಎ.ಪಿ.ಎಂ.ಸಿ. ಯಾರ್ಡ್‍ನಲ್ಲಿ ಸರ್ಕಾರದಿಂದ ಮಂಡಿ ಮಳಿಗೆಯನ್ನು ಪಡೆದುಕೊಂಡು 10 ವರ್ಷದ ವಹಿವಾಟಿಗೆ ಪರವಾನಗಿ ಪಡೆದು ಕೊಂಡಿದೆ. ಮಡಿಕೇರಿ ಕಾಫಿ ಕೃಪಾ ಕಟ್ಟಡದಲ್ಲಿ ಮಳಿಗೆಯನ್ನು ತೆÀರೆದಿದ್ದು 15 ಲಕ್ಷ ವ್ಯಾಪಾರ ವಹಿವಾಟು ನಡೆಸುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಂಘದ ಅಧೀನದಲ್ಲಿರುವ ಜಾಗವನ್ನು ಮಾರಾಟ ಮಾಡಿ ವಾಣಿಜ್ಯ ಮಳಿಗೆ ಕಟ್ಟುವ ನಿರ್ಧಾರ ಕೈಗೊಳ್ಳಲು ಆಡಳಿತ ಮಂಡಳಿ ಚಿಂತನೆ ಹರಿಸಲಾಗಿದೆ. ಘಟಕದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಹಿತ ದೃಷ್ಟಿಯನ್ನು ಕಾಯ್ದುಕೊಳ್ಳಲು ಈ ತೀರ್ಮಾನಕ್ಕೆ ಅನುಮೋದನೆ ನೀಡ ಬೇಕು ಎಂದು ಮನವಿ ಮಾಡಿದರು. ಪ್ರಸ್ತುತ ವರ್ಷದಲ್ಲಿ ನಿಧನರಾದ ಸಂಘದ ಸದಸ್ಯರುಗಳಾದ ಚೆಪ್ಪುಡಿರ ದೇವಯ್ಯ, ಮಹಾಬಲೇಶ್ವರ ಭಟ್ ಹಾಗೂ ಪ್ರಕೃತಿ ವಿಕೋಪದಿಂದ ನಿಧನರಾದವರಿಗೆ ಈ ಸಂದರ್ಭ ಸಂತಾಪ ಸೂಚಿಸಲಾಯಿತು.

ಸಂಘದ ನಿದೆರ್Éೀಶಕಿ ಚೇಂದಂಡ ಸುಮಿಸುಬ್ಬಯ್ಯ ಪ್ರಾರ್ಥಿಸಿದರು. ಕಳೆದ ಸಾಲಿನ ವರದಿಯನ್ನು ಸಂಘದ ವ್ಯೆವಸ್ಥಾಪಕ ಜೆ.ವಿ. ಹೇಮಂತ್ ಕುಮಾರ್ ವಂದಿಸಿದರು.

ಸಂಘದ ಉಪಾಧ್ಯಕ್ಷ ಎಂ.ಕೆ. ಅರವಿಂದ್, ನಿರ್ದೇಶಕರುಗಳಾದ ಕೆ. ಸುನೀಲ್ ಮಾದಪ್ಪ, ಕೆ.ಯು. ಪೂಣಚ್ಚ, ಶೋಭಾ ಕುಟ್ಟಪ್ಪ, ಸಿ.ಎಂ. ಸೋಮಣ್ಣ, ಎಸ್.ಎಂ. ವಿಶ್ವನಾಥ್, ಎ.ಆರ್. ಕೃಷ್ಣ ಕುಮಾರ್, ಎಸ್.ಎಸ್. ಸುರೇಶ್ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.