ಸೋಮವಾರಪೇಟೆ, ಸೆ. 8: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಹಲವಷ್ಟು ಹಾನಿ ಸಂಭವಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೊಡಗಿಗೆ ಅಗತ್ಯ ನೆರವು ನೀಡಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಾ. 10ರಂದು ನಿಯೋಗದೊಂದಿಗೆ ತೆರಳಿ ಭೇಟಿ ಮಾಡುವದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರೊಂದಿಗೆ ಇಂದು ಸೋಮವಾರ ಪೇಟೆ ತಾಲೂಕಿನ ಗರ್ವಾಲೆ, ಹರಗ, ಬೆಟ್ಟದಳ್ಳಿ, ಶಾಂತಳ್ಳಿ, ಕೂತಿ ಗ್ರಾಮದಲ್ಲಿ ಮಳೆ, ಪ್ರವಾಹದಿಂದ ಉಂಟಾಗಿರುವ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದರು, ಕೇಂದ್ರ ಸರ್ಕಾರದಿಂದ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ದಾಗಿ ಭರವಸೆಯಿತ್ತರು. ಈಗಾಗಲೇ 1709 ಮಂದಿ (ಮೊದಲ ಪುಟದಿಂದ) ಸಂತ್ರಸ್ತರಿಗೆ 5.40 ಕೋಟಿ ಪರಿಹಾರ ವನ್ನು ಕೇಂದ್ರದಿಂದ ಒದಗಿಸಲಾಗಿದೆ. ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರ 8 ಕೋಟಿ ಅನುದಾನದೊಂದಿಗೆ ಸಂಸದರ ಅನುದಾನವನ್ನೂ ಸೇರಿಸಿ 10.50ಕೋಟಿ ಅನುದಾನವನ್ನು ಅತೀ ಹೆಚ್ಚು ಪ್ರವಾಹಪೀಡಿತವಾಗಿರುವ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿಗೆ ವಿನಿಯೋಗಿಸಲಾಗುವದು ಎಂದರು.
ಸಂಪೂರ್ಣವಾಗಿ ಮನೆ ಕಳೆದು ಕೊಂಡವರಿಗೆ ಎನ್ಡಿಆರ್ಎಫ್ ನಿಧಿಯಡಿ ತಕ್ಷಣಕ್ಕೆ 1 ಲಕ್ಷ ಪರಿಹಾರ ಒದಗಿಸಲಾಗುವದು. ಈಗಾಗಲೇ ಮನೆ ಕಳೆದುಕೊಂಡವರಿಗೆ ಅವರು ಹೇಳುವ ಜಾಗದಲ್ಲೇ, ಸರ್ಕಾರ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸುಮಾರು 7-10 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿ ಕೊಡ ಲಾಗುವದು. ಕಾಫಿ ತೋಟಗಳನ್ನು ಕಳೆದುಕೊಂಡವರಿಗೆ ಬೇರೆಡೆ ಪರ್ಯಾಯ ಕೃಷಿ ಭೂಮಿ ಒದಗಿಸಿ ಕೊಡುವ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವದು ಎಂದು ಪ್ರತಾಪ್ ಸಿಂಹ ತಿಳಿಸಿದರು.
ಈಗಾಗಲೇ ಇನ್ಫೋಸಿಸ್ನ ಸುಧಾಮೂರ್ತಿ ಸೇರಿದಂತೆ ಇತರ ಕಂಪೆನಿಗಳು ಕೊಡಗಿನ ಪರ ನಿಲ್ಲುವ ಭರವಸೆ ನೀಡಿದ್ದಾರೆ. ಶಾಸಕ ಅಪ್ಪಚ್ಚು ರಂಜನ್ ಅವರ ಕೋರಿಕೆ ಮೇರೆಗೆ ಎಲ್ಲಾ ಶಾಸಕರ ನಿಧಿಯಿಂದ ತಲಾ 25ಲಕ್ಷ ಅನುದಾನ ಬರಲಿದೆ. ಇದರೊಂದಿಗೆ ಆರ್ಯವೈಶ್ಯ ಸಮಾಜ, ಕೊಡವ ಸಮಾಜ, ಬೆಂಗಳೂರು ರೋಟರಿ ಸೇರಿದಂತೆ ಇನ್ನಿತರ ಸಂಘಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಹಾನಿಗೊಳಗಾದ ಕೊಡಗನ್ನು ಪುನರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರವೂ ಅಗತ್ಯ ಸಹಕಾರ ನೀಡಲಿದೆ ಎಂದರು.
ಕೊಡಗಿನ ಪ್ರಾಕೃತಿಕ ಪ್ರಳಯವನ್ನು, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ತಾವೂ ಸಹ ಕೇಂದ್ರವನ್ನು ಒತ್ತಾಯಿಸುತ್ತೇವೆ. ಇದರ ಹೊರತಾಗಿಯೂ ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಬರಬೇಕಿದೆ. ಇಲ್ಲಿನವರ 1400 ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿದೆ. ಈಗಾಗಲೇ ಘೋಷಿಸಿರುವ 2ಲಕ್ಷದವರೆಗಿನ ಸಾಲಮನ್ನಾದಿಂದ ಕೊಡಗಿನ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊಡಗಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಸಂಸದರು ಆಗ್ರಹಿಸಿದರು.
ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ರೈತಾಪಿ ವರ್ಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಅಗತ್ಯಗಳಿಗಾಗಿ ಸಂಸದರ ನಿಧಿಯಿಂದ 10 ಲಕ್ಷ ಒದಗಿಸುವದಾಗಿ, ಹರಗ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಘೋಷಿಸಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಮನೆ ಹಾಗೂ ಕೃಷಿ ನಷ್ಟದ ಬಗ್ಗೆ ವಾಸ್ತವ ವರದಿ ನೀಡುವಂತೆ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರಿಗೆ ಸೂಚಿಸಲಾಗಿದೆ. ವಾಸಿಸಲು ಅಯೋಗ್ಯವಾದ ಮನೆಗಳನ್ನೂ ಸಹ ಸಂಪೂರ್ಣ ಹಾನಿ ಪ್ರಕರಣವೆಂದು ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ತೋಟಗಳನ್ನು ಕಳೆದು ಕೊಂಡಿರುವ ಕೃಷಿಕರಿಗೆ ಸಿ ಮತ್ತು ಡಿ ಜಾಗದಲ್ಲಿ ಜಮೀನು ಒದಗಿಸಿಕೊಡುವ ಮೂಲಕ ಕೃಷಿಕರ ರಕ್ಷಣೆಯಾಗಬೇಕು ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮನವಿ ಮಾಡಿದರು.
ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಅಪ್ಪಚ್ಚು ರಂಜನ್ ಅವರುಗಳು, ತಾಲೂಕಿನ ಗರ್ವಾಲೆ, ಬೆಟ್ಟದಳ್ಳಿ, ಹರಗ, ಶಾಂತಳ್ಳಿ, ಕೂತಿ ಗ್ರಾಮಗಳಿಗೆ ತೆರಳಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರಲ್ಲದೇ, ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದರು. ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಸುಮಾರು 20 ಏಕರೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ತೋಟ, ಗದ್ದೆ ಸರ್ವನಾಶವಾದ ಪ್ರದೇಶವನ್ನು ವೀಕ್ಷಿಸಿದರು. ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್, ಸದಸ್ಯ ತ್ರಿಶೂಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.