ಮಡಿಕೇರಿ, ಸೆ. 8: ಎರಡು ಒಲಿಂಪಿಕ್ಸ್, ಎರಡು ಏಷ್ಯನ್ ಗೇಮ್ಸ್, ಮೂರು ವಲ್ರ್ಡ್ ಚಾಂಪಿಯನ್ ಶಿಪ್, ಎರಡು ಕಾಮನ್‍ವೆಲ್ತ್ ಕ್ರೀಡಾಕೂಟ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹೆಮ್ಮೆಯ ಕ್ರೀಡಾತಾರೆ ಕೊಡಗಿನ ಕುವರಿ ಮಾಚೆಟ್ಟಿರ ಆರ್. ಪೂವಮ್ಮ, ಪ್ರಸ್ತುತ ನೆರೆಜಿಲ್ಲೆ ಮಂಗಳೂರಿನಲ್ಲೇ ನೆಲೆಸಿದ್ದರೂ ಹುಟ್ಟಿದ ಮಣ್ಣು ಕೊಡಗಿನ ಮೇಲೆ ಇವರಿಗೆ ಸಹಜವಾಗಿಯೇ ಪ್ರೀತಿಯಿದೆ. ಪ್ರಸಕ್ತ ಸಾಲಿನಲ್ಲಿ ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ದುರಂತದ ದಾರುಣತೆಯ ಬಗ್ಗೆ ಕಂಬನಿ ಮಿಡಿದಿರುವ ಇವರು ಮುಂದಿನ ದಿನಗಳಲ್ಲಿ ಈಗಿನ ಪ್ರಾಕೃತಿಕ ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ತಮ್ಮಿಂದಾಗುವ ಸಹಾಯ- ಸಹಕಾರವನ್ನು ನೀಡುವ ಅಭಿಲಾಷೆ ಹೊಂದಿರುವದಾಗಿ ತಿಳಿಸಿದ್ದಾರೆ.

ಇಂಡೋನೇಷಿಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 4x400 ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಕ್ಸೆಡ್ ಈವೆಂಟ್‍ನಲ್ಲಿ ಬೆಳ್ಳಿಯ ಪದಕದೊಂದಿಗೆ ಎರಡು ಪದಕಗಳ ಸಾಧನೆ ತೋರಿರುವ ಪೂವಮ್ಮ ‘ಶಕ್ತಿ’ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕ್ರೀಡೆ ಎನ್ನುವದು ಕೊಡಗಿನವರ ರಕ್ತದಲ್ಲೇ ಇದೆ. ಈ ಮೂಲಕವೇ ಬಹುತೇಕ ಕ್ರೀಡಾಕೂಟಗಳ ಎಲ್ಲಾ ವಿಭಾಗಗಳಲ್ಲಿ ಕೊಡಗಿನವರು ದೇಶವನ್ನು ಪ್ರತಿನಿಧಿಸಿ ಸಾಧನೆ ತೋರುತ್ತಿದ್ದಾರೆ ಎಂದ ಅವರು, ಪ್ರಸಕ್ತ ವರ್ಷದ ಏಷ್ಯನ್ ಗೇಮ್ಸ್‍ನಲ್ಲಿ ತಮ್ಮ ಹಾಗೂ ಜಿಲ್ಲೆಯ ಇತರ ಕ್ರೀಡಾಪಟುಗಳ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿದರು.

ತಾವು ಹುಟ್ಟಿ ಬೆಳೆದದ್ದು ಕೊಡಗಿನಲ್ಲೇ. ಆದರೆ ನಂತರದ ದಿನಗಳಲ್ಲಿ ಪೋಷಕರಾದ ತಂದೆ ರಾಜು, ತಾಯಿ ಜಾಜಿ ಮಂಗಳೂರಿನಲ್ಲಿ ನೆಲೆಸಿದ್ದರಿಂದ ತಾವೂ ಅಲ್ಲೇ ಇರುವದಾಗಿ ಹೇಳಿದ ಅವರು ಕೊಡಗಿನಲ್ಲಿ ಈ ಬಾರಿ ಸಂಭವಿಸಿದ ಪ್ರಾಕೃತಿಕ ದುರಂತ ನೋವು ತಂದಿದೆ ಎಂದರು.

ಕ್ರೀಡೆಯಲ್ಲಿ ತಮ್ಮ ಸಾಧನೆಗೆ ಪೋಷಕರು ಕಾರಣ ಅವರ ಪ್ರೇರಣೆ, ಸಹಕಾರ, ತರಬೇತುದಾರರ ಮಾರ್ಗದರ್ಶನದೊಂದಿಗೆ ಕ್ರೀಡೆಯಲ್ಲಿ ಸಾಧನೆ ಮಾಡಲು ಅವಕಾಶವಾಗಿದೆ ಎಂದು ಸ್ಮರಿಸಿದರು.

ವಿದ್ಯಾರ್ಥಿಗಳು ಕೇವಲ ವ್ಯಾಸಂಗದ ಮೇಲೆ ಕೇಂದ್ರೀಕೃತ ವಾಗಬಾರದು. ಇದರೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಕ್ರೀಡೆಯಲ್ಲೂ ವಿಪುಲ ಅವಕಾಶಗಳು ಇದೆ ಆದರೆ ಕಠಿಣ ಪರಿಶ್ರಮ ಅಗತ್ಯ ಎಂದು ಪೂವಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಹದಿಮೂರು ವರ್ಷದಿಂದ ಕ್ರೀಡೆಯಲ್ಲಿ ಭಾರತಕ್ಕೆ ಹೆಸರು ತರುತ್ತಿರುವ ಈಕೆ, ಈ ಹಿಂದೆ ಸರಕಾರದಿಂದ ಹೆಚ್ಚು ಸಹಕಾರ ದೊರೆಯುತ್ತಿರಲಿಲ್ಲ. ಆದರೆ ಪ್ರಸ್ತುತ ಸಿಗುತ್ತಿರುವ ಸ್ಪಂದನ ಸ್ವಾಗತಾರ್ಹವಾಗಿದೆ. ನಿನ್ನೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಚರ್ಚಿಸಿದ್ದು, ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಎಲ್ಲವೂ ಸರಿಯಾದ ಬಳಿಕ ಕೊಡಗು ಜಿಲ್ಲೆಯಲ್ಲಿ ನೊಂದವರಿಗಾಗಿ ಒಂದಷ್ಟು ಸಹಕಾರ ನೀಡಲು ಉದ್ದೇಶಿಸಿರುವದಾಗಿ ತಿಳಿಸಿದರು.

ಸದ್ಯದ ಮಟ್ಟಿಗೆ ಭಾರತ ತಂಡದ ಕ್ಯಾಂಪ್‍ನಿಂದ ರಜೆಯಲ್ಲಿ ಪೋಷಕರ ಬಳಿ ಆಗಮಿಸಿರುವ ಪೂವಮ್ಮ ಮುಂಬರಲಿರುವ ಏಷ್ಯನ್ ಚಾಂಪಿಯನ್‍ಶಿಪ್ ಹಾಗೂ ವಲ್ರ್ಡ್ ಸಿರೀಸ್‍ಗೆ ಸಿದ್ಧತೆ ಮಾಡಿಕೊಳ್ಳುವದು ತಮ್ಮ ಮುಂದಿನ ಗುರಿ ಎಂದರು.

ರೂ. 40 ಲಕ್ಷ ಬಹುಮಾನ

ಏಷ್ಯಾಡ್‍ನಲ್ಲಿ ಎರಡು ಪದಕದ ಸಾಧನೆ ಮಾಡಿರುವ ಎಂ.ಆರ್. ಪೂವಮ್ಮ ಅವರಿಗೆ ನಿನ್ನೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ರೀಡಾ ನೀತಿಯಂತೆ ಚಿನ್ನದ ಪದಕದ ಸಾಧನೆಗೆ ರೂ. 25 ಲಕ್ಷ ಹಾಗೂ ಬೆಳ್ಳಿಯ ಪದಕದ ಸಾಧನೆಗೆ ರೂ. 15 ಲಕ್ಷ ಸೇರಿ ರಾಜ್ಯ ಸರಕಾರದಿಂದ ರೂ. 40 ಲಕ್ಷ ಬಹುಮಾನದ ಚೆಕ್ ವಿತರಿಸಿದರು. ಅಲ್ಲದೆ ನಿವೇಶನ ಕಲ್ಪಿಸುವ ಕುರಿತೂ ಅವರು ಈ ಸಂದರ್ಭ ಭರವಸೆ ನೀಡಿದ್ದಾರೆ.

ಪ್ರಧಾನಿ ಅಭಿನಂದನೆ

ಜಕಾರ್ತದಲ್ಲಿ ಎರಡು ಪದಕದ ಸಾಧನೆಯ ಬಳಿಕ ತಾಯ್ನಾಡಿಗೆ ಹಿಂದಿರುಗಿದ ಪೂವಮ್ಮ ಅವರನ್ನು ಸೆಪ್ಟೆಂಬರ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ನಿವಾಸದಲ್ಲಿ ಇತರ ಕ್ರೀಡಾ ಪಟುಗಳೊಂದಿಗೆ ಅಭಿನಂದಿಸಿದರು.

-ಶಶಿ ಸೋಮಯ್ಯ