ಸೋಮವಾರಪೇಟೆ, ಸೆ. 8: ಮಳೆಯಿಂದ ಹಾನಿಗೀಡಾದ ಮನೆ ದುರಸ್ತಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ನೀಡಿದ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಬಟ್ಟೆ ಬಿಚ್ಚಿಸಿ ಜಾತಿನಿಂದನೆಯೊಂದಿಗೆ ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಕಳೆದ ತಾ. 3ರಂದು ಸೋಮವಾರಪೇಟೆಗೆ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು, ಮಸಗೋಡು ಗ್ರಾಮದ ಶೈಲಾ ಸುಧೀರ್ ದಂಪತಿಗೆ 2 ಕವರ್ನಲ್ಲಿ ತಲಾ 10 ಸಾವಿರ ರೂಪಾಯಿ ನೀಡಿದ್ದರು ಎನ್ನಲಾಗಿದೆ.
ಅವರು ಹಿಂತೆರಳಿದ ನಂತರ, ಕರವೇ ಅಧ್ಯಕ್ಷ ದೀಪಕ್, ಮಹಿಳಾ ಘಟಕದ ರೂಪಾ ಮತ್ತು ಪತಿ ಸುರೇಶ್ ಅವರುಗಳು ತನ್ನ ಬಟ್ಟೆ ಬಿಚ್ಚಿಸಿ ಹಣವನ್ನು ಹುಡುಕಾಡಿದ್ದಾರೆ. ಹಣ ಸಿಗದಿದ್ದಾಗ ಜಾತಿನಿಂದನೆಯೊಂದಿಗೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಮಸಗೋಡು ಗ್ರಾಮದ ಶೈಲಾ ಸುಧೀರ್ ಅವರು ನೀಡಿದ ದೂರಿನ ಮೇರೆ, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.