ಗುಡ್ಡೆಹೊಸೂರು, ಸೆ. 7: ಇಲ್ಲಿಗೆ ಸಮೀಪದ ಕಾವೇರಿ ನಿಸರ್ಗಧಾಮದ ಬಳಿ ಒಟ್ಟು 90 ಅಂಗಡಿ ಮಳಿಗೆಗಳು ಇದ್ದು, ಅದರಲ್ಲಿ ನದಿಯ ಭಾಗದ ಒಟ್ಟು 25 ಅಂಗಡಿಗಳಿಗೆ ಕಾವೇರಿ ನದಿ ನೀರು ನುಗ್ಗಿ ಅಲ್ಲಿನ ಅಂಗಡಿಗಳಲ್ಲಿ ಲಕ್ಷಾಂತರ ಬೆಲೆಬಾಳುವ ವಸ್ತುಗಳು ನೀರಿನಲ್ಲಿ ಮುಳುಗಿ ನಷ್ಟ ಸಂಭವಿಸಿತ್ತು.
ಈ ಕುರಿತು ಅಲ್ಲಿನ ಎನ್.ಟಿ.ಸಿ.ಯ ಸಂತ್ರಸ್ತ ವರ್ತಕರಾದ ಲೊಕೇಶ್, ಶಯರಿಯಾರ್, ಸಮೀರ್, ವಿನೀಶ್, ಜಾನ್, ನಾಗರಾಜ್, ಸಲೀಂ ಮುಂತಾದವರು ಗುಡ್ಡೆಹೊಸೂರು ಗ್ರಾ.ಪಂ. ಅಧಿಕಾರಿ ಶ್ಯಾಂ ಅವರಿಗೆ ಸೂಕ್ತಪರಿಹಾರಕ್ಕಾಗಿ ಮನವಿ ಪತ್ರವನ್ನು ನೀಡಿದ್ದಾರೆ.
ಎನ್.ಟಿ.ಸಿ. ವರ್ತಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಅಲ್ಲಿನ ವರ್ತಕರು ಲಕ್ಷಾಂತರ ರೂಗಳನ್ನು ಸರಕಾರಕ್ಕೆ ತೆರಿಗೆ ನೀಡುತ್ತಿದ್ದು, ಇದೀಗ ಪ್ರವಾಸಿಗರು ಕೊಡಗಿಗೆ ಬರುವದನ್ನು ನಿರ್ಬಂಧಿಸಲಾಗಿದೆ. ಇದರಿಂದ ಅಲ್ಲಿನ ವರ್ತಕರು ಬೀದಿಗೆ ಬೀಳುವಂತಾಗಿದೆ. ಮೊದಲೆ ವ್ಯಾಪಾರ ಕಡಿಮೆಯಾಗಿ ಮಾಲೀಕರಿಗೆ, ಬಾಡಿಗೆ ಹಣ, ಅಲ್ಲದೆ ಕರೆಂಟ್ ಬಿಲ್ ಕಟ್ಟಲುಕೂಡ ಪರದಾಡುತ್ತಿದ್ದಾರೆನ್ನಲಾಗಿದೆ. ರ್ಯಾಫ್ಟಿಂಗ್ ನಿಂತು ಯಾವದೆ ರೀತಿಯ ವ್ಯಾಪಾರ ವಯಿವಾಟು ಇಲ್ಲದೆ ಸಂಕಷ್ಟದಲ್ಲಿದ್ದ ಸಂದÀರ್ಭ ಪ್ರವಾಸಿಗರ ಪ್ರವೇಶಕ್ಕೆ ಮತ್ತೆ ನಿರ್ಬಂಧ ಹೇರಿ ಮುಂದುವರಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಅತಿವೃಷ್ಟಿಯ ಅನಾಹುತಕ್ಕೆ ಸಿಲುಕಿ ಅನೇಕರು ಮನೆ ಮಠ ಕಳೆದುಕೊಂಡಿದ್ದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ಪ್ರವಾಸಿಗರನ್ನೇ ನಂಬಿ ವ್ಯಾಪಾರ ನಡೆಸುತ್ತಿರುವ ಮಂದಿ ಕೂಡ ಕಂಗಾಲಾಗಿದ್ದಾರೆ ಎಂದು ಸ್ಥಳೀಯ ವ್ಯಾಪಾರಿ ಶ್ಯಾಂ ಅಳಲು ತೋಡಿಕೊಂಡಿದ್ದಾರೆ.
-ಗಣೇಶ್ ಕುಡೆಕ್ಕಲ್