ಮಡಿಕೇರಿ, ಆ. 28: ನಗರದಿಂದ ಮಂಗಳೂರು ರಸ್ತೆಯುದ್ದಕ್ಕೂ ತಾಳತ್‍ಮನೆ, ಕಾಟಕೇರಿ, ಮದೆ, ಜೋಡುಪಾಲ ವ್ಯಾಪ್ತಿಯಲ್ಲಿ ಭೂಕುಸಿತದೊಂದಿಗೆ ರಸ್ತೆ ಪ್ರವಾಹದಿಂದ ಕೊಚ್ಚಿ ಹೋಗಿರುವ ಭಯಾನಕ ದೃಶ್ಯವನ್ನು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಖುದ್ದಾಗಿ ಪರಿಶೀಲಿಸಿದರು.

ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತುರ್ತು ಸರಿಪಡಿಸಲು ಸರಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು.

ಬೆಟ್ಟತ್ತೂರು, 2ನೇ ಮೊಣ್ಣಂಗೇರಿ, ಜೋಡುಪಾಲ ಬಳಿ ಬೆಟ್ಟ ಸಾಲುಗಳು ಕುಸಿಯುವದರೊಂದಿಗೆ ಜಲಸ್ಫೋಟ ಗೊಂಡು ಭಾರೀ ಗಾತ್ರದ ಮರಗಳ ಸಹಿತ ಕಲ್ಲು ಬಂಡೆಗಳು ಅಪ್ಪಳಿಸಿ ಹೆದ್ದಾರಿಯನ್ನೇ ಕೊಚ್ಚಿಕೊಂಡು ಹೋಗಿರುವ ದೃಶ್ಯಗಳನ್ನು ವೀಕ್ಷಿಸಿದ ಅವರು, ರಾಜ್ಯದ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಮತ್ತು ರಾಷ್ಟ್ರೀಯ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರುಗಳ ಗಮನ ಸೆಳೆಯುವ ಇಂಗಿತ ವ್ಯಕ್ತಪಡಿಸಿದರು.

ನಗರದ ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಹಾಗೂ ಮಾಂದಲಪಟ್ಟಿ ಮಾರ್ಗಗಳಲ್ಲಿ ಭೂಕುಸಿದು ಎದುರಾಗಿರುವ ಪ್ರಾಕೃತಿಕ ಹಾನಿ ವೀಕ್ಷಿಸಿದ ಅವರು, ಬಹು ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ಸಾಲು ಸಾಲು ಮರಗಳೊಂದಿಗೆ ಮಣ್ಣು ಆವರಿಸಿಕೊಂಡಿರುವ ಕರುಣಾಜನಕ ಪರಿಸ್ಥಿತಿ ಕಂಡು ಮರುಗಿದರು.

ಇಂಜಿನಿಯರ್‍ಗಳಾದ ರಮೇಶ್, ಚರ್ಮಣ್ಣ, ಅರಣ್ಯಾಧಿಕಾರಿ ದಯಾನಂದ್, ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ ಸೇರಿದಂತೆ ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.