ಸೋಮವಾರಪೇಟೆ, ಆ. 27: ಮಹಾಮಳೆಗೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಸಾಂತ್ವನದೊಂದಿಗೆ ಧೈರ್ಯ ತುಂಬಿದರು.

ಪಟ್ಟಣ ಸಮೀಪದ ಬೇಳೂರು ಗ್ರಾಮದಲ್ಲಿರುವ ತಮ್ಮ ಶಾಖಾ ಮಠದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಶ್ರೀಗಳು, ಜಿಲ್ಲೆಯಲ್ಲಿ ಪ್ರಕೃತಿಯ ಮುನಿಸಿಗೆ ಸಾವಿರಾರು ಮಂದಿ ಬೆಲೆ ತೆರಬೇಕಾಗಿದ್ದು ದುರಂತ. ಮಾನವರಿಗೆ ಪ್ರಕೃತಿಯನ್ನು ಎದುರಿಸುವ ಶಕ್ತಿಯಿಲ್ಲ. ತಮ್ಮ ಮನೆ, ಜಮೀನು ಕಳೆದುಕೊಂಡು ಸಾಕಷ್ಟು ಮಂದಿ ನಿರಾಶ್ರಿತರಾಗಿದ್ದು ದುರದೃಷ್ಟ ಎಂದರು.

ಸಂತ್ರಸ್ತರ ನೆರವಿಗೆ ಮುರುಘಾ ಮಠ ನಿಲ್ಲಲಿದೆ. ಸಂತ್ರಸ್ತರ ಮಕ್ಕಳಿಗೆ ಮಠದ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಲಾಗುವದು. ಯಾರೂ ಇಲ್ಲದ ವೃದ್ಧಿ ಸಂತ್ರಸ್ತರಿಗೆ ಮಠದಿಂದ ನಡೆಯುತ್ತಿರುವ ವೃದ್ದಾಶ್ರಮದಲ್ಲಿ ಆಶ್ರಯ ನೀಡಲಾಗುವದು. ಸಂತ್ರಸ್ತರಿಗೆ ತಕ್ಷಣ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗುತ್ತಿದ್ದು, ಅದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರಲ್ಲದೆ, ಮಠದಲ್ಲಿರುವವರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭ ಸೋಮವಾರಪೇಟೆ ವಿರಕ್ತ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಅಧ್ಯಕ್ಷ ಮಹದೇವಪ್ಪ, ಮಠದ ವ್ಯವಸ್ಥಾಪಕ ಶಶಿಧರ್, ಪ್ರಮುಖರಾದ ಶಿವಪ್ಪ, ಶಾಂಭಶಿವಮೂರ್ತಿ, ಉದಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.