ಸೋಮವಾರಪೇಟೆ,ಆ.27: ಪ್ರಕೃತಿಯ ಆರಾಧಕರ ನಾಡಿನಲ್ಲಿ ಪ್ರಸಕ್ತ ಸಾಲಿನಲ್ಲಿ ಉಂಟಾದ ಪ್ರವಾಹ ಜನಜೀವನವನ್ನು 10 ವರ್ಷ ಹಿಂದಕ್ಕೆ ತಳ್ಳಿಕೊಂಡು ಹೋಗಿದೆ. ಗ್ರಾಮಕ್ಕೊಂದು ದೇವಾಲಯ, ದೇವರ ಬನ, ಸುಗ್ಗಿ ಉತ್ಸವಗಳನ್ನು ನಡೆಸಿ ಕೊಂಡು ಬಂದ ಪ್ರಕೃತಿ ಆರಾಧಕರ ಬದುಕಿನ ಮೇಲೆ ಪ್ರಕೃತಿಯೇ ಈ ಪರಿ ಮುನಿಸಿಕೊಂಡಿದ್ದು, ಯಾವ ಅಪರಾಧಕ್ಕೆ ಈ ಶಿಕ್ಷೆ ಎಂದು ಪ್ರಶ್ನಿಸುವಂತಾಗಿದೆ.
ಕಾಫಿ ಹೂವು ಬಿಡುವಾಗಲೇ ಹೂವಿಗೆ ಪೂಜೆ ಸಲ್ಲಿಸುವ ಮಂದಿ ಫಸಲುಕಟ್ಟಿದ್ದ ಕಾಫಿ ನೆಲಕ್ಕುರುಳುವಾಗ ಮೂಕರೋದನ ಅನುಭವಿಸು ವಂತಾಗಿದೆ. ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ವರುಣನ ಆರ್ಭಟಕ್ಕೆ ಬೆಳೆಗಾರ ವರ್ಗ ಅಕ್ಷರಶಃ ನಲುಗಿಹೋಗಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಕುಡಿಗಾಣ, ಕೊತ್ನಳ್ಳಿ, ನಾಡ್ನಳ್ಳಿ, ಮಲ್ಲಳ್ಳಿ, ಹರಗ, ಚಾಮೇರ ಮನೆ, ಮಂಕ್ಯ, ಕಿಕ್ಕರಳ್ಳಿ, ಶಿರಂಗಳ್ಳಿ, ಮೂವತ್ತೊಕ್ಲು, ಹಮ್ಮಿಯಾಲ, ಸೂರ್ಲಬ್ಬಿ, ಗರ್ವಾಲೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಕಾಫಿ ಫಸಲು ನೆಲ ಸೇರಿದೆ.
ವರುಣನ ಆರ್ಭಟದ ಎದುರು ಶರಣಾಗಿರುವ ಕಾಫಿ ಗಿಡಗಳು, ಫಸಲಿನೊಂದಿಗೆ ಎಲೆ, ರೆಂಬೆ ಕೊಂಬೆಗಳನ್ನೂ ಕಡಿದುಕೊಂಡು ಬರಲು ಕಡ್ಡಿಯಂತಾಗಿ ನಿಂತಿದೆ. ಕಳೆದ 15 ದಿನಗಳ ಹಿಂದೆ ಆರೋಗ್ಯಕರವಾಗಿ ಫಸಲಿನೊಂದಿಗೆ ನಳನಳಿಸುತ್ತಿದ್ದ ಕಾಫಿ ಗಿಡಗಳು ಇಂದು ಬಳಲಿ ಬೆಂಡಾಗಿವೆ.
ಮುಂಗಾರಿನ ಮೊದಲ ತಿಂಗಳಿನಲ್ಲಿ 21 ರಿಂದ 52 ಇಂಚುಗಳಷ್ಟು ಮಳೆಯಾಗಿದೆ. ಶಾಂತಳ್ಳಿ ಹೋಬಳಿಯ ಕೂತಿ, ತೋಳೂರುಶೆಟ್ಟಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ಮಲ್ಲಳ್ಳಿ, ಹರಗ, ಸೂರ್ಲಬ್ಬಿ, ಕಿಕ್ಕರಳ್ಳಿ ಗ್ರಾಮಗಳಿಗೆ 60 ಇಂಚಿನಷ್ಟು ಮಳೆಯಾಗಿದ್ದು, ಮುಂಗಾರು ಮಳೆಯೇ ಬೆಳೆಗಾರರಿಗೆ ಮಾರಕವಾಗಿತ್ತು. ಆ ನಂತರ ಸುರಿದ ಧಾರಾಕಾರ ಮಳೆಗೆ ಇನ್ನಷ್ಟು ಹಾನಿಗೊಂಡಿದ್ದು, ಇದೀಗ ಬೆಳೆಗಾರರು ಚೇತರಿಸಿಕೊಳ್ಳಲಾಗದಷ್ಟು ನಷ್ಟಕ್ಕೆ ಒಳಗಾಗಿದ್ದಾರೆ.
ಶಾಂತಳ್ಳಿ ಹೋಬಳಿಯ ಗ್ರಾಮಗಳಲ್ಲಿ ಜೂನ್ ತಿಂಗಳಲ್ಲಿ ಅತಿಹೆಚ್ಚು ಮಳೆ ಬಿದ್ದಿರುವ ಪರಿಣಾಮ ಕೊಳೆರೋಗದಿಂದ ಕಾಫಿ ಫಸಲು ಉದುರಿತ್ತು. ಇದರೊಂದಿಗೆ ಜೂನ್ ತಿಂಗಳಲ್ಲಿ ಬಿದ್ದ ಮಳೆಯಿಂದ ರೋಗಬಾಧೆ ಕಾಫಿ ಗೊಂಚಲಿಗೆ ವ್ಯಾಪಿಸಿ ಕಾಫಿ ಕಾಯಿಗಳು ಉದುರಿದವು. ನಂತರದ ದಿನಗಳಲ್ಲೂ ಮಳೆ ಇಳಿಮುಖವಾಗದ ಹಿನ್ನೆಲೆ ಕೆಲವೆಡೆ ಶೇ. 70ರಷ್ಟು ಕಾಫಿ ಫಸಲು ನೆಲಕ್ಕುರುಳಿದೆ.
ಕುಮಾರಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ಮಲ್ಲಳ್ಳಿ, ಹರಗ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂದಳ್ಳಿ, ಬಾಚಳ್ಳಿ, ಬೀದಳ್ಳಿ, ಇನಕನಹಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಕುಡಿಗಾಣ, ಬೀಕಳ್ಳಿ, ಬೆಕ್ಕನಳ್ಳಿ, ಹರಗ, ತೋಳೂರುಶೆಟ್ಟಳ್ಳಿ, ತಾಕೇರಿ, ತೋಳೂರುಶೆಟ್ಟಳ್ಳಿ, ಕೂತಿ, ನಗರಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೊಳೆರೋಗದಿಂದ ಉಳಿಕೆಯಾಗಿದ್ದ ಫಸಲು, ವರುಣನ ಕೋಪಕ್ಕೆ ತುತ್ತಾಗಿ ಇದೀಗ ನೆಲಕ್ಕಚ್ಚಿವೆ.
ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು. ಅರೇಬಿಕಾ ಕಾಫಿ ಗಿಡಗಳಿಗೇ ರೋಗಬಾಧೆ ಹೆಚ್ಚಾಗಿದೆ. ತಾಲೂಕಿನ ಒಟ್ಟು 28,540ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವದರಿಂದ 22,940 ಹೆಕ್ಟೇರ್‍ನಲ್ಲಿ ಅರೇಬಿಕಾ, 5,600 ಹೆಕ್ಟೇರ್‍ನಲ್ಲಿ ರೋಬಾಸ್ಟಾ ಬೆಳೆಯಲಾಗುತ್ತಿದೆ.
ಇದರೊಂದಿಗೆ ಅಲ್ಲಲ್ಲಿ ಬರೆಕುಸಿತ, ಬೆಟ್ಟಗುಡ್ಡ ಕುಸಿತದಿಂದ ಗದ್ದೆಗಳ ಮೇಲೂ ಮಣ್ಣಿನ ರಾಶಿ ನಿಂತಿದ್ದು, ಕೆಲವೆಡೆ ತೋಟಗಳೇ ಗದ್ದೆಯ ಮೇಲಿವೆ. ಭಾರೀ ಮಳೆಗೆ ಪ್ರವಾಹ ಉಂಟಾಗಿ ನದಿ ತೊರೆಗಳು ಗದ್ದೆಗಳ ಮೇಲೆಯೇ ಹರಿದಿದ್ದು, ನಾಟಿಗೆ ಸಿದ್ಧಗೊಂಡಿದ್ದ ಸಸಿಮಡಿ, ನಾಟಿ ಮಾಡಿದ್ದ ಪೈರುಗಳು ನಾಶಗೊಂಡಿವೆ. ಗದ್ದೆಗಳ ಮೇಲೆ ಮರಳು ನಿಂತಿರುವ ಪರಿಣಾಮ ಕೃಷಿ ಮಾಡಲು ಅಯೋಗ್ಯವಾಗಿ ಗದ್ದೆಗಳು ಪರಿವರ್ತನೆಗೊಂಡಿವೆ.
ಮಾದಾಪುರ ಭಾಗದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು ಶಾಂತಳ್ಳಿಯ ವಿವಿಧೆಡೆಯೂ ಇಂತಹ ಅನಾಹುತ ಕಂಡುಬಂದಿದೆ. ಸುಮಾರು 50 ಎಕರೆ ಕಾಫಿ ಪ್ರದೇಶ ಭೂ ಕುಸಿತಕ್ಕೆ ಒಳಗಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳ ಕೊರತೆ: ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದು, ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಸರ್ವೆ ಕಾರ್ಯಕ್ಕೆ ತೋಟಗಾರಿಕೆ ಮತ್ತು ಕೃಷಿ ಇಲಾಖಾ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ್ದು, ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಆದರೆ ಸೋಮವಾರಪೇಟೆಯಲ್ಲಿ ವಾಹನಗಳ ಕೊರತೆಯಿಂದ ಸರ್ವೆ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.
-ವಿಜಯ್ ಹಾನಗಲ್