ಕೂಡಿಗೆ, ಆ. 27: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಮನೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
552 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ತಾತ್ಕಾಲಿಕ ಮನೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡ ಲಾಗಿಲ್ಲ. ಇದೀಗ ವಿದ್ಯುತ್ ಇಲ್ಲ, ದೀಪ ಉರಿಸಲು ಸೀಮೆಎಣ್ಣೆಯೂ ಇಲ್ಲದೆ, ಕತ್ತಲೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಲ್ಲಿ ಆದಿವಾಸಿಗಳು ಇದ್ದಾರೆ.
ತಾತ್ಕಾಲಿಕ ಶೆಡ್‍ಗಳನ್ನು ಕಳೆದ ಎಂಟು ತಿಂಗಳ ಹಿಂದೆ ಬ್ಯಾಡಗೊಟ್ಟದಲ್ಲಿ ನಿರ್ಮಿಸಿಕೊಟ್ಟರು. ಬಾಗಿಲುಗಳ ಅಳತೆಯನ್ನು ತೆಗೆದುಕೊಂಡು ಹೋದವರು ಇದುವರೆಗೂ ಶೆಡ್‍ಗೆ ಬಾಗಿಲುಗಳನ್ನು ಅಳವಡಿಸಲು ಬಂದಿಲ್ಲ. ಈಗಾಗಲೇ ಶಾಶ್ವತ ಮನೆಗಳ ನಿರ್ಮಾಣ ಗೋಡೆ ಮಟ್ಟದಲ್ಲಿ ಬಂದು ಮುಂದಿನ ಎರಡು ತಿಂಗಳಲ್ಲಿ ಬ್ಯಾಡಗೊಟ್ಟ ಹಾಗೂ ಬಸವಹಳ್ಳಿ ಕೇಂದ್ರಗಳಲ್ಲಿ ಆಯಾ ನಿವಾಸಿಗಳಿಗೆ ವಾಸಿಸಲು ಮನೆಗಳನ್ನು ನೀಡುವ ಸಿದ್ಧತೆಗಳು ನಡೆಯುತ್ತಿದ್ದರೂ ತಾತ್ಕಾಲಿಕ ಶೆಡ್‍ಗೆ ಬಾಗಿಲುಗಳು ಇನ್ನೂ ಬಂದಿರುವದಿಲ್ಲ. ಬಾಗಿಲು ಗಳನ್ನು ಭೂ ಸೇನಾ ನಿಗಮದವರು ಅಳವಡಿಸಲು ಇದುವರೆಗೂ ಬಂದಿಲ್ಲ. ಬಾಗಿಲ ವ್ಯವಸ್ಥೆಯಿಲ್ಲದ ಕಾರಣ ಬಟ್ಟೆಯನ್ನು ಬಾಗಿಲಿಗೆ ಅಳವಡಿಸಲಾಗಿದೆ.
ಅತಿ ಶೀಘ್ರವಾಗಿ ಹಾಡಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸೋಲಾರ್ ದೀಪ ನೀಡುವದಾಗಿ ತಿಳಿಸಿದ ಸಮಾಜ ಕಲ್ಯಾಣ ಇಲಾಖೆಯವರು ಇದುವರೆಗೂ ಯಾವದೇ ಕ್ರಮಕೈಗೊಂಡಿಲ್ಲ ಎಂದು ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಆರೋಪಿಸಿದ್ದಾರೆ.
ಈ ಕೇಂದ್ರದಲ್ಲಿ ಈಗಾಗಲೇ ನೂರಾರು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾತ್ರಿ ವೇಳೆ ಓದಲು ವಿದ್ಯುತ್ ಇಲ್ಲದೆ, ಕಲಿಕೆಗೂ ತೊಂದರೆಯಾಗುತ್ತಿದೆ. ಅಲ್ಲದೆ, ಶೌಚಾಲಯಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಇದರತ್ತ ಸಂಬಂಧ ಪಟ್ಟವರು ಗಮನಹರಿಸಿ ಸಮಸ್ಯೆ ನಿವಾರಿಸಬೇಕು ಎಂದು ಸ್ಥಳೀಯ ಆದಿವಾಸಿ ಮುಖಂಡರಾದ ಮಲ್ಲಪ್ಪ, ವಿಜಯ, ಬೋಜಪ್ಪ, ಕುಜ್ಞಮ್ಮ, ಜಾನಮ್ಮ, ಚೋಮಣ್ಣ, ಸುರಿಯ ಮುಂತಾದವರು ಆಗ್ರಹಿಸಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ