ಕುಶಾಲನಗರ, ಆ. 25: ಹಾರಂಗಿ ಜಲಾಶಯಕ್ಕೆ ಈ ಸಾಲಿನಲ್ಲಿ ದಾಖಲೆ ಪ್ರಮಾಣದ ನೀರು ಹರಿದು ಬಂದಿದೆ. ಕಳೆದ ಬಾರಿಗಿಂತ 4 ಪಟ್ಟು ಹೆಚ್ಚಿನ ನೀರು ಬಂದಿದ್ದು ಕಳೆದ ಜೂನ್ 1 ರಿಂದ ಆಗಸ್ಟ್ 23 ರ ತನಕ 67.46 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 15 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು.

ಜಲಾನಯನ ಪ್ರದೇಶಗಳಲ್ಲಿ ಹೆಚ್ಚುವರಿ ಮಳೆ ಕಾರಣ ಅಣೆಕಟ್ಟೆಗೆ ಒಳಹರಿವು ಏರಿಕೆ ಕಂಡಿದ್ದು 56.58 ಟಿಎಂಸಿ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ. ಕಾಲುವೆ ಮೂಲಕ 3.37 ಟಿಎಂಸಿ ಪ್ರಮಾಣದ ನೀರು ಹರಿದಿದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಅಣೆಕಟ್ಟು ನಿರ್ಮಾಣ ನಂತರ ಇದೇ ಪ್ರಥಮ ಬಾರಿಗೆ ಅಣೆಕಟ್ಟೆಯಿಂದ ನದಿಗೆ ಗರಿಷ್ಠ ಪ್ರಮಾಣದ ನೀರು ಹರಿಸಲಾಗಿದೆ. ಆಗಸ್ಟ್ 17 ರಂದು 85 ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ಜಲಾಶಯದ ಕ್ರ್ರಸ್ಟ್‍ಗೇಟ್‍ಗಳ ಮೂಲಕ ಬಿಡಲಾಗಿದೆ ಎಂದಿದ್ದಾರೆ. ಪ್ರಸಕ್ತ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕ್ಷೀಣಿಸಿದ್ದು, 10,104 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದೆ. ಒಟ್ಟು 6 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ ಎಂದಿದ್ದಾರೆ.

ಹಾರಂಗಿ ಅಣೆಕಟ್ಟಿನ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನೆರವಿನೊಂದಿಗೆ 8 ಕೋಟಿ ರೂ. ಮಂಜೂರಾಗಿದ್ದು ಕೇಂದ್ರ ಜಲ ಆಯೋಗದ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಅಣೆಕಟ್ಟೆಯ ಕ್ರ್ರಸ್ಟ್‍ಗೇಟ್‍ಗಳ ದುರಸ್ಥಿ ಕಾಲುವೆಗೆ ನೀರು ಬಿಡುವ ಗೇಟ್‍ಗಳು ಹಾಗೂ ಅಣೆಕಟ್ಟೆಯ ತಳಭಾಗದ ಗೇಟ್‍ಗಳ ದುರಸ್ತಿಯೊಂದಿಗೆ ಅಭಿವೃದ್ದಿ ಕಾಮಗಾರಿ ಈ ಯೋಜನೆಯ ಮೂಲಕ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಅಣೆಕಟ್ಟು ಯಾವದೇ ರೀತಿಯ ಅಭದ್ರತೆಯನ್ನು ಎದುರಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕ ಮಾಹಿತಿಗಳನ್ನು ಬಿತ್ತರಿಸಿರುವದು ಸರಿಯಲ್ಲ ಎಂದಿದ್ದಾರೆ. ಈ ಸಂದರ್ಭ ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿಗಳಾದ ಧರ್ಮರಾಜ್, ನಾಗರಾಜ್ ಇದ್ದರು.

- ಚಂದ್ರಮೋಹನ್