ಸುಂಟಿಕೊಪ್ಪ, ಆ. 25: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಇಕೋ ಕ್ಲಬ್ ಹಾಗೂ ವಿಜ್ಞಾನ ಸಂಘದ ವತಿಯಿಂದ ವಿಶ್ವ ಜೈವಿಕ ಇಂಧನ ದಿನಾಚರಣೆ ಏರ್ಪಡಿಸಲಾಗಿತ್ತು. ಶಾಲಾ ಆವರಣದಲ್ಲಿ ಹೊಂಗೆ ಮತ್ತು ಬೇವಿನ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಶಿಕ್ಷಕ ಬಾಲಕೃಷ್ಣ, ಪರಿಸರದಲ್ಲಿ ಹೆಚ್ಚು ಹೆಚ್ಚು ಜೈವಿಕ ಇಂಧನ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸ್ನೇಹಿ ಇಂಧನ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು.
ಜೈವಿಕ ಇಂಧನ ಅಗತ್ಯ ಬಳಕೆಯ ಮಹತ್ವ ಕುರಿತು ಮಾತನಾಡಿದ ಸರ್ಕಾರಿ ಪ್ರೌಢಶಾಲೆಯ ಇಕೋ-ಕ್ಲಬ್‍ನ ಉಸ್ತುವಾರಿ ಶಿಕ್ಷಕರೂ ಆದ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಇಂದಿನ ಜಾಗತಿಕ ಬದಲಾವಣೆಯಿಂದ ಕಚ್ಚಾತೈಲಗಳು ಮುಗಿದುಹೋಗುತ್ತಿದ್ದು, ಭವಿಷ್ಯದಲ್ಲಿ ಇಂಧನದ ಕೊರತೆ ಉಂಟಾಗಲಿದೆ. ಈ ದಿಸೆಯಲ್ಲಿ ನಾವು ಪರ್ಯಾಯ ಇಂಧನವಾದ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಜೈವಿಕ ಇಂಧನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಎಂ.ಎನ್.ಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರು ಇದ್ದರು.
ಶಾಲಾ ಆವರಣದಲ್ಲಿ ಜೈವಿಕ ಇಂಧನ ಗಿಡಗಳನ್ನು ನೆಡಲಾಯಿತು. ನಂತರ ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಜೈವಿಕ ಇಂಧನ-ಭವಿಷ್ಯದ ಇಂಧನ, ಹಸಿರು ಇಂಧನ-ಜೈವಿಕ ಇಂಧನ, ಜೈವಿಕ ಇಂಧನ ಬಳಸಿ- ಮಾಲಿನ್ಯ ತಡೆಯಿರಿ, ಬೈಸಿಕಲ್ ಬಳಸಿ ಇಂಧನ ಉಳಿಸಿ, ಹಸಿರು ಕ್ರಾಂತಿ- ಜೈವಿಕ ಇಂಧನದ ಕ್ರಾಂತಿ ಮುಂತಾದ ಪರಿಸರಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿ ಜನ ಜಾಗೃತಿ ಮೂಡಿಸಿದರು.