ಮಡಿಕೇರಿ, ಆ. 26: ಅತಿವೃಷ್ಠಿ ಅನಾಹುತದಿಂದ ಸಂತ್ರಸ್ತರಾದ ಕೊಡಗಿನ ಜನತೆಗೆ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಸ್ಪಂದಿಸಿದ್ದು, ರೂ. 5 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದೆ.
ರಾಜ್ಯ ಸಂಘದ ಅಧ್ಯಕ್ಷ ಪಿ.ಎಂ. ಪೆಮ್ಮಯ್ಯ ಮತ್ತು ಕಾರ್ಯದರ್ಶಿ ಕುಮಾರ ಎಸ್. ಕರನಿಂಗ ಅವರ ನೇತೃತ್ವದಲ್ಲಿ ಬೆಟ್ಟೇಗೌಡ ಗುಳೇದ, ಪ್ರಭುಸ್ವಾಮಿ ಮತ್ತು ಸುನಿಲ್, ಇವರುಗಳು ತಾ. 25ರಂದು ಅಗತ್ಯ ವಸ್ತುಗಳೊಂದಿಗೆ ಸುಮಾರು ರೂ. 5 ಲಕ್ಷ ಮೌಲ್ಯದ ಬೆಳೆಬಾಳುವ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲು ಜಿಲ್ಲಾಡಳಿತಕ್ಕೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಕೊಡಗು ಜಿಲ್ಲಾ ಎಸ್.ಪಿ. ಡಾ. ಸುಮನ್ ಪೆಣ್ಣೇಕರ್ ನಿವೃತ್ತ ಅಧಿಕಾರಿಗಳ ಈ ಕಾರ್ಯವನ್ನು ಶ್ಲಾಘಿಸಿದರು. ಈ ಕಾರ್ಯಕ್ಕೆ ಪಿ.ಎಂ. ಪೆಮ್ಮಯ್ಯ ಅವರು ಮತ್ತು ಚಕ್ಕಮಗಳೂರು ಜಿಲ್ಲೆಯವರು ತಲಾ ರೂ. 50,000ವನ್ನು ನೀಡಿದ್ದಾರೆ. ಉಳಿದಂತೆ ಮೈಸೂರು ಹಾಗೂ ಉಳಿದ ಎಲ್ಲಾ ಜಿಲ್ಲೆಯವರು ರೂ. 10,000ಗಳನ್ನು ಧನ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಸಂಘದ ಅಧ್ಯಕ್ಷ ಎಂ.ಎ. ಅಪ್ಪಯ್ಯ ಕೂಡ ಹಾಜರಿದ್ದು, ಮೇಲ್ಕಂಡ ತಂಡದವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡಿ, ತಮ್ಮ ವೈಯಕ್ತಿಕ ಧನ ಸಹಾಯವನ್ನು ಮಾಡಿರುವದಾಗಿ ಸಂಘದ ಪ್ರಮುಖರು ತಿಳಿಸಿದ್ದಾರೆ.