ಮಡಿಕೇರಿ, ಆ. 26: ಮಡಿಕೇರಿ ತಾಲೂಕಿನ ಗಾಳಿಬೀಡು, ಮುಕ್ಕೋಡ್ಲು, ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ಮೇಘಸ್ಪೋಟ ಹಾಗೂ ಜಲಸ್ಟೋಟದಿಂದಾಗಿ ಬೆಟ್ಟಕುಸಿತ, ಭೂಕುಸಿತ, ಪ್ರಾಣಹಾನಿಯಂತಹ ಭಾರೀ ದುರಂತಗಳು ಸಂಭವಿಸಿದ್ದು, ಈ ಬಾರಿ ಇದೊಂದು ಕರಾಳ ಅಧ್ಯಾಯವಾಗಿದೆ. ಈ ವಿಭಾಗದಲ್ಲಿನ ಸಮಸ್ಯೆಗಳು ಒಂದೆಡೆಯಾದರೆ ಇನ್ನು ಜಿಲ್ಲೆಯ ಹಲವಾರು ಭಾಗಗಳಲ್ಲಿಯೂ ಪ್ರಾಕೃತಿಕ ವಿಕೋಪದಿಂದಾಗಿ ಕೊಡಗು ಜಿಲ್ಲೆ ಹಲವಾರು ಸಮಸ್ಯೆಗಳಿಂದ ಜರ್ಜರಿತವಾಗಿವೆ. ಕೃಷಿ ಪ್ರಧಾನವಾಗಿರುವ ಈ ಜಿಲ್ಲೆ ಈ ಬಾರಿ ಹಲವಾರು ಪ್ರಾಣಹಾನಿ, ಆಸ್ತಿಪಾಸ್ತಿ- ಮನೆ ಹಾನಿಗಳೊಂದಿಗೆ ಕೃಷಿ ಫಸಲಿನ ಮೇಲೂ ಗದಾಪ್ರಹಾರ ಮಾಡಿದೆ. ಹಲವಾರು ಕಡೆಗಳಲ್ಲಿ ಗದ್ದೆಗಳಲ್ಲಿ ಭತ್ತದ ಫಸಲು ಹಾನಿಗೀಡಾಗಿರುವದು... ಗದ್ದೆಗಳಲ್ಲಿ ಮಣ್ಣು ಆವರಿಸಿ ನಷ್ಟ ಸಂಭವಿಸಿರುವ ಘಟನೆಗಳು ನಡೆದಿವೆ. ಇದರೊಂದಿಗೆ ಕಾಡಾನೆಗಳ ಉಪಟಳದಿಂದಲೂ ಕೃಷಿಕರು ಕಂಗಾಲಾಗಿದ್ದಾರೆ. ಭತ್ತ ಮಾತ್ರವಲ್ಲದೆ ಬಾಳೆ, ಕರಿಮೆಣಸು, ಏಲಕ್ಕಿ, ಕಿತ್ತಳೆ, ಅಡಿಕೆ ಸೇರಿದಂತೆ ಇನ್ನಿತರ ಉಪ ಬೆಳೆಗಳು ವಾಯು- ವರುಣನ ಅಬ್ಬರದಿಂದಾಗಿ ನೆಲಕಚ್ಚಿವೆ. ಇದರೊಂದಿಗೆ ಜಿಲ್ಲೆಯ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾಗಿರುವದು ಕಾಫಿ. ಕಾಫಿ ಫಸಲು ಸೇರಿದಂತೆ ಕಾಫಿ ಉದ್ಯಮ ಅವಲಂಬಿತರು ಪ್ರಸಕ್ತ ವರ್ಷ ಎಲ್ಲವನ್ನೂ ಕಳೆದುಕೊಳ್ಳುವಂತಾಗಿದೆ. ಜಿಲ್ಲೆ ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶ... ಪುಟ್ಟ ಜಿಲ್ಲೆಯಾದರೂ ಈ ಜಿಲ್ಲೆಯೊಳಗೆ ಒಂದೊಂದು ರೀತಿಯಲ್ಲಿ ವಿಭಿನ್ನವಾದ ಸಮಸ್ಯೆಗಳು ಇವೆ. ಮಕ್ಕಂದೂರು, ಮುಕ್ಕೋಡ್ಲು, ಗಾಳಿಬೀಡು, ಗರ್ವಾಲೆ, ಮಾದಾಪುರ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಕಾಫಿ ತೋಟಗಳೇ ಸರ್ವ ನಾಶವಾಗಿವೆ. ಊರಿಗೆ ಊರೇ ಇಲ್ಲದಂತಾಗಿರುವ ಪರಿಸ್ಥಿತಿಯೊಂದಿಗೆ ವರ್ಷಾನುಗಟ್ಟಲೆ ಜನತೆಯ ಬದುಕಿಗೆ ಪೂರಕವಾಗಿದ್ದ ತೋಟಗಳು ಮಣ್ಣಿನಡಿ ಸಿಲುಕಿ ಇಲ್ಲಿ ಕಾಫಿ ತೋಟಗಳು ಇತ್ತು ಎಂಬದನ್ನೇ ಊಹಿಸಲಾಗದಂತಾಗಿದೆ.

ಇಂತಹ ಸಮಸ್ಯೆಗಳು ಒಂದೆಡೆಯಾದರೆ, ನಾಲ್ಕುನಾಡು ವಿಭಾಗದಲ್ಲಿ ಕಕ್ಕಬೆ, ನಾಲಡಿ, ನೆಲಜಿ, ಯವಕಪಾಡಿ, ಭಾಗಮಂಡಲ, ಚೆಟ್ಟಿಮಾನಿ, ಕುಂದಚೇರಿಯಂತಹ ಗ್ರಾಮ ವ್ಯಾಪ್ತಿಗಳು ದಕ್ಷಿಣ ಕೊಡಗಿನ ಬಿರುನಾಣಿ ಗ್ರಾ.ಪಂ. ವ್ಯಾಪ್ತಿ, ಶ್ರೀಮಂಗಲ, ಕುಟ್ಟ ಗ್ರಾ.ಪಂ. ವ್ಯಾಪ್ತಿಗಳಲ್ಲಿಯೂ ಪ್ರಸಕ್ತ ವರ್ಷ ಭಾರೀ ಮಳೆಯಾಗಿರುವದರಿಂದ ಯಾವದೇ ಫಸಲುಗಳು ಇಲ್ಲದಂತಾಗಿವೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಮತ್ತಿತರ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿಯಾಗಿದೆ. ಗ್ರಾಮೀಣ ಪ್ರದೇಶಗಳಾದ ಇಂತಹ ಪ್ರದೇಶಗಳಿಗೆ ಹೋಲಿಸಿದರೆ ಜಿಲ್ಲೆಯ ನಡುಭಾಗದಲ್ಲಿ ಬರುವ ಹಲವು ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಮಳೆಯ ಪ್ರಮಾಣ ಕಡಿಮೆ ಇದ್ದರೂ ಈ ಪ್ರದೇಶಗಳಲ್ಲಿ ಸುರಿಯುವ ವಾಡಿಕೆ ಮಳೆ ಈ ಬಾರಿ ಈ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿರುವದರಿಂದ ಇಂತಹ ಪ್ರದೇಶಗಳಲ್ಲಿಯೂ ಕೃಷಿ ಫಸಲುಗಳು ನೆಲಕಚ್ಚಿವೆ. ತೋಟಗಳಲ್ಲಿ ದಿನಗಟ್ಟಲೆ ನೀರು ನಿಂತಿದ್ದ ಪರಿಣಾಮದಿಂದಲೂ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದು, 2018ರ ಈ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಇಡೀ ಜಿಲ್ಲೆಯ ಜನತೆಯ ಬದುಕು, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದಂತಾಗಿದೆ.

ಕೆಲವೊಂದು ಕಡೆಗಳಲ್ಲಿ ತೋಟಗಳೇ ಮಣ್ಣಿನಡಿ ಸಿಲುಕಿರುವದು, ಗಿಡಗಳು ಕೊಚ್ಚಿಹೋಗಿರುವ ಸನ್ನಿವೇಶವಾದರೆ ಇನ್ನಿತರ ಕಡೆಗಳಲ್ಲಿ ತೋಟ- ಗಿಡಗಳು ಇದ್ದರೂ ಇದರಲ್ಲಿ ಯಾವದೇ ಫಸಲು ಉಳಿದಿಲ್ಲ. ಗಿಡಗಳಲ್ಲಿನ ಎಲೆಗಳೇ ಇಲ್ಲದಂತಾಗಿರುವದೂ ಗೋಚರವಾಗುತ್ತಿದೆ. ಸುಮಾರು 150ರಿಂದ 160 ಇಂಚು ಮಳೆಯಾಗುತ್ತಿದ್ದ ಪ್ರದೇಶಗಳಲ್ಲಿ 250ರಿಂದ 300 ಇಂಚಿಗಿಂತಲೂ ಅಧಿಕ ದಾಖಲೆಯ ಮಳೆ ಸುರಿದಿರುವದು, 40ರಿಂದ 60 ಇಂಚು ಮಳೆಯಾಗುತ್ತಿದ್ದ ಕಡೆಗಳಲ್ಲಿ ಇದರ ದುಪ್ಪಟ್ಟು ಮಳೆಯಾಗಿರುವದು ಇದರೊಂದಿಗೆ ಭಾರೀ ಗಾಳಿಯ ಹೊಡೆತ, ಜೂನ್ ತಿಂಗಳಿನಿಂದ ಈತನಕ ಪೂರ್ಣವಾಗಿ ಶೀತದ ವಾತಾವರಣ ಕೊಡಗಿನ ಕೃಷಿಕರು, ಬೆಳೆಗಾರರನ್ನು ಧೃತಿಗೆಡುವಂತೆ ಮಾಡಿದೆ ಎಂದು ಕಕ್ಕಬೆಯ ಬೆಳೆಗಾರ ಪಾಂಡಂಡ ನರೇಶ್ ಅವರು ‘ಶಕ್ತಿ’ಗೆ ವಿವರಿಸಿದ್ದಾರೆ. ಈ ವಿಭಾಗದಲ್ಲಿ ಕಾಫಿ ಗಿಡಗಳು ಉಳಿದಿವೆ. ಆದರೆ ಗಿಡಗಳಲ್ಲಿ ಫಸಲು ಹೋಗಲಿ... ಎಲೆಗಳು ಕೂಡ ಕಾಣದಂತಾಗಿವೆ ಎಂದು ಅವರು ಪರಿಸ್ಥಿತಿಯನ್ನು ಅವಲೋಕಿಸಿ ಜನತೆಯ ಮುಂದಿನ ಭವಿಷ್ಯವೇನು ಎಂಬ ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕಾಫಿ ಮತ್ತಿತರ ಕೃಷಿ ಫಸಲು ಶೇ. 90ರಷ್ಟು ನಷ್ಟಕ್ಕೊಳಗಾಗಿದ್ದರೆ, ಜಿಲ್ಲೆಯ ಮಧ್ಯಭಾಗದಲ್ಲಿ ಸುಮಾರು ಶೇ.60ಕ್ಕೂ ಅಧಿಕ ನಷ್ಟ ಸಂಭವಿಸಿವೆ. ಜಿಲ್ಲೆಯಲ್ಲಿ ಕೃಷಿಗೆ ಹೊಡೆತವಾದರೆ ಇದು ಎಲ್ಲಾ ರೀತಿಯ ವಹಿವಾಟು ಸೇರಿದಂತೆ ಇನ್ನಿತರ ಅವಲಂಬಿತರ ಬದುಕಿಗೂ ಮಾರಕ ಎಂಬದನ್ನು ಅರ್ಥೈಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೊಡಗಿನ ಬಗ್ಗೆ ವಿಶೇಷ ಕಾಳಜಿ ತೋರಬೇಕೆಂದು ನರೇಶ್ ಅಭಿಪ್ರಾಯಪಟ್ಟಿದ್ದಾರೆ.

-ಶಶಿಸೋಮಯ್ಯ