ಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಉಂಟಾಗಿರುವ ಪ್ರಕೃತಿ ವಿಕೋಪದಿಂದಾಗಿ ವ್ಯಾಪಕ ಕಷ್ಟ- ನಷ್ಟಗಳು, ಜೀವಹಾನಿಗಳು ಸಂಭವಿಸಿವೆ. ಘಟಿಸಿಹೋಗಿರುವ ಈ ಪರಿಸ್ಥಿತಿಯನ್ನು ಸರಿಪಡಿಸುವ ವ್ಯವಸ್ಥೆಯೊಂದಿಗೆ ಜಿಲ್ಲೆಯನ್ನು ಈ ಹಿಂದಿನಂತೆ ಸದೃಢಗೊಳಿಸುವ ನಿಟ್ಟಿನಲ್ಲಿ ಸದ್ಯದಲ್ಲಿ ಚಿಂತನಾಸಭೆಯೊಂದನ್ನು ಏರ್ಪಡಿಸಲು ಪೊನ್ನಂಪೇಟೆ ಕೊಡವ ಸಮಾಜ ಮುಂದಾಗಲಿದೆ ಎಂದು ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರು ತಿಳಿಸಿದ್ದಾರೆ. ಪ್ರಕೃತಿ ವಿಕೋಪದಿಂದ ಜಿಲ್ಲೆ ಅದರಲ್ಲೂ ಕೆಲವು ಪ್ರದೇಶಗಳು ಜರ್ಜರಿತವಾಗಿದ್ದು, ಸಾಕಷ್ಟು ಮಂದಿ ಸಂತ್ರಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತೊಂದರೆಗೊಳಗಾದ ಜಿಲ್ಲೆಯ ನೈಜ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗಳು ಅಗತ್ಯವಾಗಿವೆ. ಇದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಈ ರೀತಿಯಾಗಿ ಎಲ್ಲಾ ರೀತಿಯಲ್ಲೂ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಸಮಾಜದಿಂದ ಈಗಾಗಲೇ ಒಂದೆರಡು ಸಭೆಗಳನ್ನು ನಡೆಸಲಾಗಿದೆ. ಸದ್ಯದಮಟ್ಟಿಗೆ ಸರಕಾರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದಾನಿಗಳು ಸಹಕಾರ ನೀಡುತ್ತಿದ್ದಾರೆ.

ಆದರೆ ಮುಂದಿನ ದಿನಗಳಲ್ಲಿ ಶಾಶ್ವತವಾದ ಪರಿಹಾರ ಮಾರ್ಗದ ಅಗತ್ಯವಿರುವದನ್ನು ಮನಗಂಡು ವಿವಿಧ ಕೊಡವ ಸಮಾಜಗಳು ಒಳಗೊಂಡಂತೆ ಈ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲೇ ಹುಟ್ಟಿ ಬೆಳೆದು ಇಲ್ಲಿ ಶಾಶ್ವತವಾಗಿರುವವರು ಇದ್ದಾರೆ. ಬದುಕು ಕಂಡುಕೊಳ್ಳಲು ಬಂದಿರುವ ಅಸ್ಸಾಂ ರಾಜ್ಯದಂತಹ ವಲಸಿಗರು ಇದ್ದಾರೆ. ಕೆಲಸ ಅರಸಿ ಬಂದವರಿಗೆ ಕೆಲಸ ನೀಡುತ್ತಿದ್ದವರಿಗೇ ಇಂದು ಸೂರು ಇಲ್ಲದಂತಾಗಿದೆ. ಈ ಕಾರಣಗಳೆಲ್ಲವನ್ನೂ ಅವಲೋಕಿಸಿ ಸೂಕ್ತ ಅಧ್ಯಯನ ನಡೆಸುವ ಅನಿವಾರ್ಯತೆಯೂ ಎದುರಾಗಿದೆ. ಸರಕಾರ ನೀಡುತ್ತಿರುವ ಅಥವಾ ದಾನಿಗಳು ನೀಡುತ್ತಿರುವ ಪರಿಹಾರ ನೈಜ ಸಂತ್ರಸ್ತರಿಗೆ ತಲಪುತ್ತಿಲ್ಲ ಎಂಬ ಕೂಗೂ ಕೇಳಿ ಬಂದಿದೆ. ಮೂಲನಿವಾಸಿಗಳು ಕೊಡಗು ಬಿಟ್ಟು ತೆರಳುವದು ಸಾಧ್ಯವಿಲ್ಲ. ಇದರಿಂದಾಗಿ ಮುಂದಿನ ಭವಿಷ್ಯದ ಕುರಿತು ನಿರ್ಧರಿಸುವದು ಅಗತ್ಯವಾಗಿದ್ದು, ಈ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಗುವದು. ಪೊನ್ನಂಪೇಟೆ ಕೊಡವ ಸಮಾಜ ಈಗಾಗಲೇ ಸಂತ್ರಸ್ತರಾದವರಿಗೆ ಪರಿಹಾರ ಕಲ್ಪಿಸಲು ಮುಂದಾಗಿದ್ದು, ಈ ಕುರಿತೂ ಪ್ರಯತ್ನ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.