ಸೋಮವಾರಪೇಟೆ, ಆ. 25: ಮಹಾ ಮಳೆಯೋ.., ಪ್ರವಾಹವೋ.., ನೆರೆಯ ಭೀಕರತೆಯೋ..? ಒಟ್ಟಾರೆ ಪ್ರಕೃತಿಯ ರುದ್ರತಾಂಡವಕ್ಕೆ ಜಿಲ್ಲೆ ನಲುಗಿದೆ. ಮಳೆಗೆ ಗೋಡೆಯಲ್ಲಿ ಬಿರುಕು ಮೂಡಿದರೆ, ಒಂದು ಭಾಗ ಕುಸಿದರೆ ದೊಡ್ಡ ಸುದ್ದಿಯಾ ಗುತ್ತಿದ್ದುದು ಇದೀಗ ಅವೇನೂ ದೊಡ್ಡ ವಿಷಯವಲ್ಲ ಎಂಬಷ್ಟರ ಮಟ್ಟಿಗೆ ಕೊಡಗಿನ ಭೂ ಭಾಗಗಳು ಬದಲಾಗಿವೆ. ಏಕರೆಗಟ್ಟಲೆ ಭೂ ಕುಸಿತ ಸಂಭವಿಸಿರುವದು ಕಣ್ಣಮುಂದಿದೆ. ಸುಂದರ ಪ್ರಾಕೃತಿಕ ಸೊಬಗು ಮರೆಯಾಗಿ ಭೀಕರತೆ, ಭಯಾನಕತೆಯ ಭೀಭತ್ಸ ದೃಶ್ಯ ಗೋಚರಿಸುತ್ತಿದೆ. ಬೃಹತ್ ಸೇತುವೆಯ ತಳಭಾಗದಲ್ಲಿ ತಿಳಿನೀರಾಗಿ ಹರಿಯುತ್ತಿದ್ದ ಹಟ್ಟಿಹೊಳೆ ಇದೀಗ ಕೆಂಪು ಬಣ್ಣಕ್ಕೆ ತಿರುಗಿದೆ. ಜರುಗಿದ ಬರೆ, ಬೆಟ್ಟ, ಮಣ್ಣು, ಕಲ್ಲು, ಮರ, ಮನೆ, ಪ್ರಾಣಿಸಂಕುಲವನ್ನು ತನ್ನೊಂದಿಗೆ ಹೊತ್ತೊಯ್ಯುತಿದೆ. ಸುಂದರ ತಾಣವಾಗಿದ್ದ ಹಟ್ಟಿ ಹೊಳೆಯೀಗ ಭೀಭತ್ಸ ಚಿತ್ರಣಗಳ ತಾಣವಾಗಿ ಬದಲಾಗಿದೆ.ರಾಜ್ಯಹೆದ್ದಾರಿಯನ್ನು ಇಬ್ಬಾಗ ಮಾಡಿ ಹೊಳೆಯೊಂದು ಹರಿಯುತ್ತಿದೆ. ಹೊಳೆ ಹರಿಯುತ್ತಿದ್ದು ದರಿಂದಲೇ ಈ ಪ್ರದೇಶಕ್ಕೆ ಹಟ್ಟಿ ಹೊಳೆಯೆಂಬ ಹೆಸರು ಬಂದಿರ ಬಹುದು. ಅದೆಷ್ಟೋ ಮಳೆಗಾಲವನ್ನು ಕಂಡಿರುವ (ಮೊದಲ ಪುಟದಿಂದ) ಈ ಹೊಳೆ ಈ ವರ್ಷ ಭೋರ್ಗರೆದಷ್ಟು ಈ ಹಿಂದೆ ಭೋರ್ಗರೆದಿರಲಿಲ್ಲ. ಈ ಹೊಳೆಗೆ ನಿರ್ಮಿಸಿರುವ ಸೇತುವೆಯಿಂದ ಕೇವಲ 800 ಮೀಟರ್ ದೂರದ ಚಿತ್ರಣ ಕ್ಷಣಕಾಲ ಎದೆ ಝಲ್ಲೆನಿಸುವಂತೆ ಮಾಡುತ್ತಿದೆ.

ಹಟ್ಟಿಹೊಳೆಯ ನಿವಾಸಿ ಚಿತ್ರ ಸುಬ್ಬಯ್ಯ ಅವರಿಗೆ ಸೇರಿದ ಸುಂದರ ಮನೆ, ಉತ್ತಮ ಫಸಲು ನೀಡುತ್ತಿದ್ದ ಕಾಫಿ ತೋಟ, ನೂರಾರು ಬಗೆಯ ಮರಗಳು ಪ್ರಕೃತಿಯ ಗಧಾಪ್ರಹಾರಕ್ಕೆ ನಲುಗಿ ಹತ್ತಾರು ಏಕರೆಯಷ್ಟು ಗದ್ದೆ ಪ್ರದೇಶದಲ್ಲಿ ಹರಡಿಕೊಂಡಿದೆ. ಸೇತುವೆಯಿಂದ 800 ಮೀಟರ್ ದೂರದಲ್ಲಿ ಸಂಭವಿಸಿರುವ ಭಾರೀ ಭೂಕುಸಿತ ಕಣ್‍ಹಾಯಿಸಿದಷ್ಟು ದೂರಕ್ಕೂ ಕಾಣಸಿಗುತ್ತಿದೆ.

ಚಿತ್ರ ಸುಬ್ಬಯ್ಯ ಅವರ ಮನೆ, ತೋಟ, ಲೈನ್‍ಮನೆ ಸೇರಿದಂತೆ ಈ ಒಂದೇ ಭಾಗದಲ್ಲಿ ಸುಮಾರು 30 ಎಕರೆಗೂ ಅಧಿಕ ಭೂಪ್ರದೇಶ ಕುಸಿತಗೊಂಡಿದೆ. ಇದರೊಂದಿಗೆ ಕಡಂದಾಳು ಎಂಬಲ್ಲಿ 8 ಮನೆಗಳೇ ಮಾಯವಾಗಿವೆ. ಲಾರೆನ್ಸ್, ಪ್ರೇಮಾ ಸೇರಿದಂತೆ ಇತರ 6 ಕುಟುಂಬಗಳು ವಾಸವಿದ್ದ ಮನೆಯ ಅವಶೇಷಗಳು ಪತ್ತೆಯಾಗದಷ್ಟರ ಮಟ್ಟಿಗೆ ಭೂ ತಾಯಿ ಬದಲಾಗಿದ್ದಾಳೆ.

ಹಟ್ಟಿಹೊಳೆಯ ಚಿತ್ರ ಸುಬ್ಬಯ್ಯ ಅವರ ಲೈನ್‍ಮನೆಯಲ್ಲಿದ್ದ 2 ಕುಟುಂಬಗಳನ್ನು ಪಂಚಾಯಿತಿಯಿಂದ ತಾ. 16ರಂದೇ ಸ್ಥಳಾಂತರಿಸಿದ್ದರಿಂದ ಜೀವಹಾನಿ ತಪ್ಪಿದೆ. 18ರಂದು ಕುಸಿಯಲು ಶುರುವಿಟ್ಟ ಭೂಮಿ ಒಂದೇ ದಿನದಲ್ಲಿ ಹಟ್ಟಿಹೊಳೆಯ ಹಳೆಯ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಇಲ್ಲಿಂದ ಕಾಂಡನಕೊಲ್ಲಿ, ಕೊಪ್ಪತ್ತೂರು, ಕಡಂದಾಳುವರೆಗೆ ರಾಜ್ಯ ಹೆದ್ದಾರಿಯೇ ಇಲ್ಲವಾಗಿದೆ.

ಕಾಂಡನಕೊಲ್ಲಿ ಹಾಗೂ ಹಾಲೇರಿಯನ್ನು ಸಂಪರ್ಕಿಸುತಿದ್ದ ರಸ್ತೆಯೇ ಇಲ್ಲವಾಗಿರುವ ಹಿನ್ನೆಲೆ, ಬೋಯಿಕೇರಿ ಮಾರ್ಗವಾಗಿ ಕಾಂಡನಕೊಲ್ಲಿ ತಲಪಬೇಕಿದೆ. ಕಡಂದಾಳು ಎಂಬಲ್ಲಿದ್ದ 8 ಮನೆಗಳು ಕಣ್ಮರೆಯಾಗುವ ಮೂಲಕ ಕಡಂದಾಳು ಎಂಬ ಪ್ರದೇಶವೇ ಇಲ್ಲವಾಗಿದೆ. ಈ ಮೂರು ಗ್ರಾಮಗಳಿಂದ ಸುಮಾರು 115 ಮನೆಗಳಿದ್ದು, 9 ಮನೆಗಳು ಸಂಪೂರ್ಣ ಕಣ್ಮರೆಯಾಗಿವೆ. ಉಳಿದಿರುವ ಅನೇಕ ಮನೆಗಳಲ್ಲಿ ಬಿರುಕು ಮೂಡಿದ್ದು, ಮಳೆ ಬಂದರೆ ಭಯದ ಬೆವರು ಮೂಡುವಂತಾಗಿದೆ.

ಮಾದಾಪುರದಿಂದ ಹಟ್ಟಿಹೊಳೆಗೆ ತೆರಳುವ 5 ಕಿ.ಮೀ. ರಾಜ್ಯ ಹೆದ್ದಾರಿಯಲ್ಲೂ ಭಾರೀ ಭೂ ಕುಸಿತ ಸಂಭವಿಸಿದೆ. ಇದರಿಂದಾಗಿ ಮಾದಾಪುರ-ಮಡಿಕೇರಿ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಮಾದಾಪುರದಿಂದ ತೆರಳುವ ರಸ್ತೆಯ ಎಡಭಾಗದಲ್ಲಿ ನಾಲ್ಕೈದು ಕಡೆಗಳಲ್ಲಿ ಭೂಮಿ ಕುಸಿದು ಹೊಳೆ ಸೇರಿದ್ದರೆ, ಎರಡು ಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡಿದೆ. ಲಘುವಾಹನಗಳು ಹಟ್ಟಿಹೊಳೆಯವರೆಗೆ ತೆರಳಬಹುದಾಗಿದೆ. ಹೊಳೆಯ ಬದಿಗಳಲ್ಲಿ ಕುಸಿತಗೊಳ್ಳುತ್ತಿರುವ ಹಿನ್ನೆಲೆ ಹೊಳೆಪಾತ್ರ ಅಗಲವಾಗುತ್ತಿದೆ.

ಹಟ್ಟಿಹೊಳೆಯಿಂದ ಎಸ್ಟೇಟ್‍ನ ಲೈನ್‍ಮನೆಗಳಿಗೆ ತೆರಳುವ ರಸ್ತೆ ನೀರಿನ ಹರಿವಿಗೆ ಕೊಚ್ಚಿ ಹೋಗಿದ್ದು, ಕಾರ್ಮಿಕರು ಮರದ ಮೇಲೆ ತೊರೆ ದಾಟಬೇಕಿದೆ. ಕಳೆದ ತಾ. 17ರಿಂದ ಹಟ್ಟಿಹೊಳೆಯಲ್ಲಿ ಭಾರೀ ಪ್ರವಾಹ ಉಂಟಾಗಿ ಅಪಾಯದ ಮಟ್ಟ ಮೀರಿ ಹರಿದಿದೆ. ಪರಿಣಾಮ ಹೊಳೆ ಪಾತ್ರದ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಸಂತ್ರಸ್ತರು ಮನೆ ಕಡೆ ಮುಖ ಮಾಡಿದ್ದಾರೆ.

ಪರ್ಯಾಯ ರಸ್ತೆಯೇ ದಾರಿ: ಮಾದಾಪುರದಿಂದ ಹಟ್ಟಿಹೊಳೆ ಮೂಲಕ ಕಾಂಡನಕೊಲ್ಲಿ, ಹಾಲೇರಿ, ಮಕ್ಕಂದೂರು ಮಾರ್ಗವಾಗಿ ಜಿಲ್ಲಾ ಕೇಂದ್ರ ಸಂಪರ್ಕಿಸುವ ರಾಜ್ಯ ಹೆದ್ದಾರಿ ದುರಸ್ತಿ ಕಾರ್ಯ ಕೈಗೊಳ್ಳಲಾಗದಷ್ಟು ಹಾನಿಯಾಗಿದೆ. ಮಾದಾಪುರದಿಂದ 3 ಕಿ.ಮೀ. ದೂರದಿಂದ ಕುಸಿಯಲು ಪ್ರಾರಂಭಿಸಿರುವ ರಾಜ್ಯ ಹೆದ್ದಾರಿ ಕಾಂಡನಕೊಲ್ಲಿ, ಹಾಲೇರಿವರೆಗೂ ಅಲ್ಲಲ್ಲಿ ಕುಸಿದಿದೆ. ಹಟ್ಟಿಹೊಳೆಯಲ್ಲಿ ಕುಸಿದಿರುವ ರಸ್ತೆ, ಭಯಾನಕ ಚಿತ್ರಣವನ್ನು ಸೃಷ್ಟಿಸಿದೆ. ಈ ರಸ್ತೆಯನ್ನು ಪುನರ್ ನಿರ್ಮಿಸುವ ಕಾರ್ಯ ಅಸಾಧ್ಯ. ಬದಲಿ ಮಾರ್ಗವೇ ಪರಿಹಾರೋಪಾಯ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

11 ಮನೆಗಳು ಕಣ್ಮರೆ: ಮಾದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವಂತೆ ಹಟ್ಟಿಹೊಳೆ, ಕಡಂದಾಳು, ಮುಕ್ಕೋಡ್ಲು, ಮೂವತ್ತೊಕ್ಲು ಗ್ರಾಮಗಳಲ್ಲಿ ಒಟ್ಟು 11 ಮನೆಗಳು ಕಣ್ಮರೆಯಾಗಿರುವ ಬಗ್ಗೆ ಮಾದಾಪುರ ಗ್ರಾ.ಪಂ.ಗೆ ಮಾಹಿತಿ ಬಂದಿದೆ. ಇದರೊಂದಿಗೆ ನೂರಾರು ಮನೆಗಳು ಬಿರುಕು ಬಿಟ್ಟಿರುವ ಬಗ್ಗೆ ಮನವಿ ಸಲ್ಲಿಕೆಯಾಗಿದೆ. ಮನೆ ಹಾನಿ ಸಂಬಂಧ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ.

- ವಿಜಯ್ ಹಾನಗಲ್