ಮಡಿಕೇರಿ, ಆ. 25: ಒಂದೆಡೆ ಮಡಿಕೇರಿ-ಮಂಗಳೂರು ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ಜಿಲ್ಲಾ ಕೇಂದ್ರದಿಂದ ಸೋಮವಾರಪೇಟೆ ಮಾರ್ಗದಲ್ಲೂ ವಾಹನಗಳ ಓಡಾಟಕ್ಕೆ ತೊಡಕಾಗಿರುವ ಬೆನ್ನಲ್ಲೇ, ಮಡಿಕೇರಿ-ವೀರಾಜಪೇಟೆ ಮಾರ್ಗದಲ್ಲೂ ಅಪಾಯ ಎದುರಾಗತೊಡಗಿದೆ. ನಗರದಿಂದ ವೀರಾಜಪೇಟೆಯತ್ತ ತೆರಳುವ ರಸ್ತೆಯ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಈ ನಡುವೆ ಮೇಕೇರಿ ಬಳಿ ಇದುವರೆಗೆ ಅಲ್ಪ ಮಣ್ಣು ಜರಿದಿದ್ದ ರಸ್ತೆ ಇಂದು ಬಹುತೇಕ ಹಾನಿಗೊಂಡಿದೆ.ಹೀಗಾಗಿ ಕೆಲವು ಸಮಯ ನಗರದಿಂದ ಮೇಕೇರಿ ಮಾರ್ಗವಾಗಿ ಕಾಟಕೇರಿ-ಭಾಗಮಂಡಲ ಮೂಲಕ ಮಂಗಳೂರಿನತ್ತ ತೆರಳುವ ವಾಹನಗಳ ಸಹಿತ, ವೀರಾಜಪೇಟೆಯತ್ತ ಮೂರ್ನಾಡು ಮೂಲಕ ಸಾಗುವ ವಾಹನಗಳಿಗೂ ಅಡಚಣೆ ಉಂಟಾಯಿತು.ಕೂಡಲೇ ಜಿಲ್ಲಾಡಳಿತದಿಂದ ಪಾಲಿಬೆಟ್ಟದ ಬಿಬಿಟಿಸಿ ಕಂಪೆನಿಯ ಸಹಕಾರದೊಂದಿಗೆ 70 ಮಂದಿ ಕಾರ್ಮಿಕರು ತುರ್ತು ಕೆಲಸ ಆರಂಭಿಸಿ, ತ್ವರಿತವಾಗಿ ವಾಹನಗಳ ಮರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತದಿಂದ ಹಾನಿಗೊಂಡಿರುವ ರಸ್ತೆಗೆ ‘ಎಂಸ್ಯಾಂಡ್’ನೊಂದಿಗೆ ಜಲ್ಲಿ, ಕಲ್ಲುಗಳನ್ನು ಮೂಟೆಗಳಲ್ಲಿ ತುಂಬಿ ಸರಿಪಡಿಸುವ ಕೆಲಸ ಕೈಗೊಳ್ಳಲಾಯಿತು. ನೂರಾರು ವಾಹನಗಳು ಈ ಮಾರ್ಗದಲ್ಲಿ ಸಕಾಲದಲ್ಲಿ ತೆರಳಲಾರದೆ ಚಾಲಕರು, ಪ್ರಯಾಣಿಕರು ಪರದಾಡಬೇಕಾಯಿತು.
ಪೊಲೀಸ್ ಇಲಾಖೆಯಿಂದ ಸಂಚಾರ ಸುಗಮಗೊಳಿಸಲು ಸಿಬ್ಬಂದಿಯೊಂದಿಗೆ ಸಂಚಾರ ಠಾಣಾಧಿಕಾರಿ ಸಹಿತ ಪೊಲೀಸ್ ಬಳಗ ಕಾರ್ಯನಿರ್ವಹಿಸಿತು. ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಹೆದ್ದಾರಿ ದುರಸ್ತಿಗೆ ತುರ್ತು ಗಮನ ಹರಿಸಿದರು.
ಕಾಮಗಾರಿ ಪರಿಶೀಲನೆ: ಈಗಾಗಲೇ ಮೂರ್ನಾಡು ಮಾರ್ಗ ಅಪಾಯದ ಮುನ್ಸೂಚನೆ ಬೆನ್ನಲ್ಲೇ, ಮಂಗಳೂರು ರಸ್ತೆಯ ಭೂಕುಸಿತ ಸ್ಥಳದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಕೆಲಸಕ್ಕೆ ರಾಷ್ಟ್ರೀಯ
(ಮೊದಲ ಪುಟದಿಂದ) ಹೆದ್ದಾರಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಪ್ರಾಧಿಕಾರದ ಅಧೀಕ್ಷಕ ಕಾರ್ಯಪಾಲಕ ಅಭಿಯಂತರ ರಾಘವನ್ ಹಾಗೂ ನುರಿತ ತಜ್ಞರಾದ ನಿವೃತ್ತ ಕಾರ್ಯಪಾಲಕ ಅಭಿಯಂತರ ಜ್ವಾಲೇಂದ್ರ ಕುಮಾರ್ ತಂಡ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.
ಭೂಕುಸಿದಿರುವ ಹೆದ್ದಾರಿ ಬದಿ ಸುಧಾರಣಾ ಕೆಲಸಕ್ಕೆ ಮುಂದಾಗಿರುವ ಸಿಬ್ಬಂದಿಗೆ ಅಧಿಕಾರಿಗಳು ತಾಂತ್ರಿಕ ಸಲಹೆಗಳನ್ನು ನೀಡುತ್ತಿದ್ದ ದೃಶ್ಯ ‘ಶಕ್ತಿ’ಗೆ ಎದುರಾಯಿತು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿ ರಾಘವನ್ ಪ್ರತಿಕ್ರಿಯಿಸಿ, ಮೇಲಿಂದ ಮೇಲೆ ಭೂಕುಸಿತದಿಂದ ಅಲ್ಲಲ್ಲಿ ಸಮಸ್ಯೆಗಳು ನಿರಂತರ ಎದುರಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾಧ್ಯವಿರುವ ಮಟ್ಟಿಗೆ ತಾತ್ಕಾಲಿಕ ಕೆಲಸ ಮಾಡಲಾಗುತ್ತಿದೆ ಎಂದರು.
ಮಳೆ ಕಡಿಮೆಯಾದ ಬಳಿಕ ಒಟ್ಟಾರೆ ಹೆದ್ದಾರಿಯ ಹಾನಿ ಬಗ್ಗೆ ಅಂದಾಜು ಸಮೀಕ್ಷೆ ನಡೆಸಿ, ಶಾಶ್ವತ ಪರಿಹಾರಕ್ಕೆ ಅಗತ್ಯ ಗಮನ ಹರಿಸಲಾಗುವದು ಎಂದು ರಾಘವನ್ ಸ್ಪಷ್ಟಪಡಿಸಿದರು. ಈಗಾಗಲೇ ಅಲ್ಲಲ್ಲಿ ಎದುರಾಗಿರುವ ಅಪಾಯದ ಸ್ಥಳಗಳ ಪರಿಶೀಲನೆ ನಡೆಸಲಾಗಿದ್ದು, ತಜ್ಞರ ಸಲಹೆಯಂತೆ ಕೇಂದ್ರಕ್ಕೆ ವರದಿ ಸಲ್ಲಿಸಿ ಕೆಲಸ ಕೈಗೊಳ್ಳಲಾಗುವದು ಎಂದರು.
ಪರ್ಯಾಯ ರಸ್ತೆಗೂ ತೊಡಕು: ಪದೇ ಪದೇ ಮಂಗಳೂರು ರಸ್ತೆ ಕುಸಿತದಿಂದ ಪಾರಾಗಲೂ ಗಾಳಿಬೀಡು-ಕಡಮಕಲ್, ಸುಬ್ರಹ್ಮಣ್ಯ ರಸ್ತೆಗೆ ಗಮನ ಸೆಳೆಯಲಾಗಿದ್ದು, ಈಗಿನ ಮಳೆಯಿಂದಾಗಿ ಆ ಭಾಗದಲ್ಲೂ ಭಾರೀ ತೊಡಕುಗಳು ಎದುರಾಗಿ ಸದ್ಯದ ಪರಿಸ್ಥಿತಿಯಲ್ಲಿ ಏನೂ ಮಾಡಲಾಗದ ಸನ್ನಿವೇಶ ನಿರ್ಮಾಣವಾಗಿದ್ದು, ಇರುವ ರಸ್ತೆಗಳಲ್ಲೇ ಸುಧಾರಣಾ ಕ್ರಮದೊಂದಿಗೆ ವಾಹನಗಳು ಸಂಚರಿಸುವಂತಾಗಿದೆ.