ಮಡಿಕೇರಿ, ಆ. 26: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಕಳೆದ 25 ದಿನಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಸ್ಥಗಿತಗೊಂಡಿರುವ ಎಲ್ಲಾ ಅಂಗನವಾಡಿ ಕೇಂದ್ರಗಳು ಸೇರಿದಂತೆ ಶಾಲಾ - ಕಾಲೇಜುಗಳು ತಾ. 27 ರಿಂದ (ಇಂದಿನಿಂದ) ಪುನರಾರಂಭಗೊಳ್ಳಲಿವೆ. ಯಾವದಾದರೂ ಶಾಲೆಯಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರ ಇನ್ನು ಮುಂದುವರಿದಿದ್ದರೆ ಅಂತಹ ಕೇಂದ್ರಗಳಲ್ಲಿರುವ ಮಕ್ಕಳ ಸಹಿತ ಇತರರಿಗೆ ಸಮೀಪದ ಶಾಲೆಗಳಲ್ಲಿ ಪಠ್ಯ ಬೋಧನೆ ನಡೆಯಲಿದೆ.

ಶಾಲೆ, ಕಾಲೇಜುಗಳಿಗೆ ಬರುವ ಮಕ್ಕಳಿಗೆ ಅನಿವಾರ್ಯ ಸಂದರ್ಭ ವಸತಿಯ ಅಗತ್ಯವಿದ್ದರೆ, ಆಯಾ ಶಾಲಾ - ಕಾಲೇಜು ಮುಖ್ಯಸ್ಥರು ಮೇಲುಸ್ತುವಾರಿಯೊಂದಿಗೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶಿಸಿದ್ದಾರೆ. ಅಲ್ಲದೆ, ಸಂತ್ರಸ್ತರ ಕೇಂದ್ರಗಳಲ್ಲೇ ಆಸರೆ ಪಡೆದಿರುವ ಮಕ್ಕಳಿಗೆ ಅಲ್ಲಿಯೇ ಸದ್ಯದಮಟ್ಟಿಗೆ ಪಾಠ ಪ್ರವಚನಕ್ಕೆ ಕ್ರಮ ವಹಿಸುವಂತೆಯೂ ನಿರ್ದೇಶಿಸಿದ್ದಾರೆ.

ಅಧಿಕಾರಿ ಮಾಹಿತಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಸಂಬಂಧಿಸಿದ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸಂಘವು ಜಂಟಿಯಾಗಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವದಾಗಿ ಭರವಸೆ ನೀಡಿದ್ದಾರೆ.

ಈಗಾಗಲೇ ಅಂತಹ ವಿದ್ಯಾರ್ಥಿಗಳಿಗೆ ದಾನಿಗಳು ಕೂಡ ಪುಸ್ತಕ, ಬಟ್ಟೆ, ಲೇಖನ ಸಾಮಗ್ರಿ ಒದಗಿಸಿದ್ದು, ಯಾವೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಚಟುವಟಿಕೆಗೆ ಕೊರತೆಯಾಗದಂತೆ ಆತ್ಮಸ್ಥೈರ್ಯ ತುಂಬಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹೀಗಾಗಿ ಅಂಗನವಾಡಿಗಳು ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಮತ್ತು ಪಿಯುಸಿ ವಿದ್ಯಾರ್ಥಿಗಳ ಸಹಿತ ಪದವಿ ಶಿಕ್ಷಣ ಪಡೆಯುವವರಿಗೂ ಜಿಲ್ಲಾಡಳಿತ ಎಲ್ಲಾ ರೀತಿ ಸಹಯೋಗಕ್ಕೆ ಕ್ರಮ ಕೈಗೊಂಡಿರುವದಾಗಿ ವಿವರಿಸಿದ್ದಾರೆ.