ಮಡಿಕೇರಿ, ಆ. 26: ಇಲ್ಲಿನ ಅಂಬೇಡ್ಕರ್ ಭವನ ಆಶ್ರಯ ತಾಣದಲ್ಲಿ ಸುಬ್ರಮಣಿ ಶ್ರೀನಿವಾಸ್ ಎಂಬ ಖಾಸಗಿ ಬಸ್ ಚಾಲಕ ತಲೆ ತಗ್ಗಿಸಿ ಕುಳಿತಿ ದ್ದಾರೆ. ಯಾಂತ್ರಿಕವಾಗಿ ಮಾತನಾಡು ತ್ತಾರೆ. ಏನಾಯ್ತು ಎಂದು ಕೇಳಿದರೆ ‘ಮನೆ ಹೋಯ್ತು - ಮನೆ ಸಾಯಲಿ - ಹಿರಿ ಮಗನೂ ಹೋಗಿಬಿಟ್ಟ’ ಎಂದು ಕಣ್ಣೀರ್ಗರೆಯುತ್ತಾರೆ.

ಇವರ ಮನೆ ನಗರದಿಂದ ಸ್ವಲ್ಪ ಕೆಳಗೆ-ಮಂಗಳೂರು ರಸ್ತೆಯ ತಿರುವಿನಲ್ಲಿ ಇತ್ತು. ಒಮ್ಮೆಗೇ ಬರೆ ಕುಸಿದು ಮನೆಯನ್ನು ಆವರಿಸಿತು. ಸುಬ್ರಮಣಿ, ಪುತ್ರ ರಾಜ ಆರ್ಮುಗ (31) ಕೆಲಸದವರನ್ನು ಸೇರಿಸಿಕೊಂಡು ಮಣ್ಣು ತೆಗೆಸಿದರು.

ಮಣ್ಣು ತೆಗೆದಾಯಿತು. ಕೆಲಸದವರನ್ನು ಕಳುಹಿಸಿ ಬರಲು ರಸ್ತೆಗೆ ರಾಜ ಆರ್ಮುಗ ತೆರಳಿದರು. ಮರಳಿ ಬರುವಾಗ ಬರೆಯ ಬಳಿ ಕಾಲು ಹೂತುಕೊಂಡಿತು. ಅಷ್ಟರಲ್ಲಿ ಬರೆಯ ದೊಡ್ಡ ಭಾಗ ಕುಸಿದು ಬಂತು. ರಾಜ ಆರ್ಮುಗನ ತಲೆಗೆ ಕಲ್ಲೊಂದು ಬಡಿಯಿತು. ಅವರ ಮನೆ ನೆÀಲಸಮವಾಯಿತು. ಸಕ್ಕರೆ ಹಾಗೂ ಬಿ.ಪಿ. ಕಾಯಿಲೆ ಯಿಂದ ಬಳಲುತ್ತಿರುವ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದರು. ರಾಜ ಆರ್ಮುಗನನ್ನು ಮಡಿಕೇರಿ-ಮೈಸೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಫಲಕಾಣಲಿಲ್ಲ. ರಾಜ ಆರ್ಮುಗ ಅಸುನೀಗಿದರು.

ಆದರೆ ಈ ವಿಷಯ ತಂದೆ - ತಾಯಿಗೆ ಹೇಳಲೇ ಇಲ್ಲ. ತಲೆಬಿಸಿ ಆಗಿ, ಆರೋಗ್ಯ ಏರುಪೇರಾದೀತು ಎಂದು ಧಫನಕ್ಕೂ ಕರೆಯಲಿಲ್ಲ. ಮೂರು ದಿನದ ಬಳಿಕವಷ್ಟೇ ವಿಷಯ ಗೊತ್ತಾದುದು.

‘ಶಕ್ತಿ’ಯೊಂದಿಗೆ ಗದ್ಗದಿತರಾಗಿ ಮಾತನಾಡಿದ ಸುಬ್ರಮಣಿ ಶ್ರೀನಿವಾಸ್, ಆಚೆ ಪುತ್ರನೂ ಇಲ್ಲ - ಈಚೆ ಮನೆಯೂ ಇಲ್ಲ. ಇರಲು ಮನೆಯೊಂದನ್ನಾದರೂ ಕೊಡಿಸಿ ಕೊಡಿ ಎಂದು ನುಡಿದರು.

ಅವರ ಕಿರುಪುತ್ರ ಈಗಾಗಲೇ ನಷ್ಟದ ಕುರಿತು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಸ್ಪಂದಿಸಬೇಕಿದೆ. - ಅನಂತ್