ಸುಂಟಿಕೊಪ್ಪ, ಆ. 25: ಆಟೋ ಚಾಲಕರು ನಿಲ್ದಾಣವಿಲ್ಲದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆಟೋ ನಿಲುಗಡೆ ಗೊಳಿಸುತ್ತಿದ್ದು ಇದರಿಂದ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗಮನಹರಿಸಿ ಸೂಕ್ತ ಜಾಗದಲ್ಲಿ ಆಟೋ ನಿಲುಗಡೆಗೆ ನಿಲ್ದಾಣ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಆಟೋಗಳನ್ನು ನಿಲುಗಡೆ ಗೊಳಿಸ ಲಾಗುತ್ತಿದೆ. ಶನಿವಾರ ಭಾನುವಾರ ಜಿಲ್ಲೆಗೆ ಪ್ರವಾಸಿಗಾರ ದಂಡು ಆಗಮಿಸುತ್ತಿರುವದರಿಂದ ವಾಹನ ದಟ್ಟಣೆಯು ಅಧಿಕವಾಗಿರುತ್ತದೆ. ಪಾದಚಾರಿಗಳು ನಡೆದಾಡಲು ಪ್ರಯಾಸ ಪಡಬೇಕಾಗುತ್ತದೆ. ಹೆದ್ದಾರಿಗೆ ಹೊಂದಿಕೊಂಡಂತೆ ಬಲಭಾಗದಲ್ಲಿ ಸರಕಾರಿ ಜಾಗವಿದ್ದು ಅದನ್ನು ಸಮತಟ್ಟು ಮಾಡಿ ಅಥವಾ ಇಂಟರ್ ಲಾಕ್ ಅಳವಡಿಸುವ ಮೂಲಕ ಆಟೋ ನಿಲ್ದಾಣ ಮಾಡಿಕೊಡಲು ಗ್ರಾಮ ಪಂಚಾಯಿತಿ ಯವರು ಕ್ರಮ ಕೈಗೊಳ್ಳಬೇಕು.
ಹಲವಾರು ವರ್ಷಗಳಿಂದ ಸುಂಟಿಕೊಪ್ಪ ಆಟೋ ಚಾಲಕರು ಜೀವನವನ್ನು ಕೈಯಲ್ಲಿ ಹಿಡಿದು ಕೊಂಡು ಟ್ರಾಫಿಕ್ ಸಮಸ್ಯೆಯಿಂದ ಚಲಿಸುವಂತಾಗಿದೆ. ಸೂಕ್ತ ಆಟೋ ನಿಲ್ದಾಣ ಕಲ್ಪಿಸಲು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಇದುವರೆಗೆ ಆಸಕ್ತಿ ತೋರಲಿಲ್ಲ. ಗ್ರಾಮ ಪಂಚಾಯಿತಿಯವರು ಹೊಸ ಬಡಾವಣೆ ಭೂಪರಿವರ್ತನೆ ಬಗ್ಗೆ ಆಸಕ್ತಿ ತೋರುತ್ತಾರೆ. ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸುವದಿಲ್ಲ 1 ತಿಂಗಳ ಒಳಗೆ ಆಟೋ ರಿಕ್ಷಾ ನಿಲ್ದಾಣ ಕಲ್ಪಿಸದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ವಿವಿಧ ಸಂಘ-ಸಂಸ್ಥೆಯವರ ಸಹಯೋಗದೊಂದಿಗೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವದಾಗಿ ಕರ್ನಾಟಕ ರಕ್ಷಾಣ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋóಷ್ (ದಿನು) ಉಪಾಧ್ಯಕ್ಷ ಮಂಜೇಶ್, ಸಹ ಕಾರ್ಯದರ್ಶಿ ದಿನು, ಅಶೋಕ್ ಹಾಗೂ ಸಂಘದ ಸದಸ್ಯರು ಪ್ರತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.