ಮಡಿಕೇರಿ, ಆ. 25: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ ಧನ ಸಹಾಯ ನೀಡಿದರು. ಸೇವಾಭಾರತಿ ಆಶ್ರಯದಲ್ಲಿ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪದಲ್ಲಿರುವ ಮಕ್ಕಂದೂರುವಿನ ಇಬ್ಬರು ವಿವಾಹವಾಗಲಿರುವ ಯುವತಿಯರಿಗೆ ತಲಾ ರೂ. 50 ಸಾವಿರ ನೀಡಿದರು. ಮಂಜುಳಾಳ ವಿವಾಹ ತಾ. 26ರಂದು (ಇಂದು) ನಡೆಯಲಿದ್ದು, ಇನ್ನೊಬ್ಬಾಕೆ ರಂಜಿತಾಳ ವಿವಾಹ ಸೆ.12ರಂದು ನಡೆಯಲಿದೆ. ನಂತರ ಕಾಟಕೇರಿಯಲ್ಲಿ ಭೂಕುಸಿತಕ್ಕೆ ಸಿಲುಕಿ ಗಾಯಗೊಂಡು ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಚ್ಚಲ್ಪಾಡಿ ಯತೀಶ್‍ಗೆ ರೂ. 50 ಸಾವಿರ ನೀಡಿ ಮಾನವೀಯತೆ ಮೆರೆದಿದ್ದಾರೆ.