ಮಡಿಕೇರಿ, ಆ. 25: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಕೊಡಗು ನಮ್ಮದು ಕೊಡಗರು ನಮ್ಮವರು ನಿಮ್ಮ ಕಷ್ಟದಲ್ಲಿ ನಾವಿದ್ದೇವೆ’ ಎಂಬ ಘೋಷವಾಕ್ಯದೊಂದಿಗೆ ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಮೈಸೂರಿನ ರಾಮಕೃಷ್ಣ ವೃತ್ತದಲ್ಲಿ ‘ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಹಾಗೂ ನೆರವಿನ ಜಾಗೃತಿ ಜಾಥಾ’ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಮೈಸೂರಿನ ಜನ ಹೆಚ್ಚಾಗಿ ಕಾವೇರಿ ನೀರನ್ನೇ ಕುಡಿಯುತ್ತಿದ್ದು, ಭಾರತಕ್ಕೆ ಅನೇಕ ವೀರ ಯೋಧರನ್ನು ನೀಡಿದ ಪುಣ್ಯಭೂಮಿ ಕೊಡಗು. ಇದೀಗ ಪ್ರಕೃತಿ ವಿಕೋಪದಿಂದ ಕೊಡಗಿನ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲಿ ಸೂರು ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ನಾವು ನೆರವಾಗಬೇಕು, ಮೈಸೂರಿನವರಾದ ನಾವೆಲ್ಲರೂ ಕೊಡಗಿಗೆ ಒಂದು ರೀತಿಯಲ್ಲಿ ಋಣಿಯಾಗಿರುವದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಆಂದೋಲನ ವೃತ್ತದಿಂದ ಆರಂಭವಾದ ನಿಧಿ ಸಂಗ್ರಹ ಹಾಗೂ ಜಾಗೃತಿ ಜಾಥಾವು ನಾಲ್ಕು ತಂಡಗಳಾಗಿ ಕುವೆಂಪುನಗರದ ವಿವೇಕಾನಂದ ವೃತ್ತ, ರಾಜರಾಜೇಶ್ವರಿ ನಗರ, ಕನಕದಾಸ ನಗರ ಶಾರದದೇವಿ ನಗರ ರಾಮಕೃಷ್ಣ ನಗರ, ಬೋಗಾದಿ ಇಲ್ಲೆಲ್ಲ ತೆರಳಿ ಸುಮಾರು ರೂ 75,000 ನಿಧಿ ಸಂಗ್ರಹ ಮಾಡಿ ಅದರೊಂದಿಗೆ ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿಗಳು ಸೇರಿ ಒಟ್ಟು ರೂ. 1,00,000(ಒಂದು ಲಕ್ಷ) ಮೊತ್ತದಲ್ಲಿ ಒಂದುನೂರು ದೊಡ್ಡ ಕಿಟ್ ಬ್ಯಾಗ್ ಅದರೊಳಗೆ ಮೂವತ್ತು ಬಗೆಯ ಅತ್ಯವಶ್ಯಕ ದಿನಬಳಕೆಯ ವಸ್ತುಗಳನ್ನಿಟ್ಟು ನೇರವಾಗಿ ಕೊಡಗಿಗೆ ತೆರಳಿ ಅಲ್ಲಿನ ಕುಶಾಲನಗರ ಸರಕಾರಿ ಶಾಲೆ, ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್, ಚೌಡೇಶ್ವರಿ ಕಲ್ಯಾಣ ಮಂಟಪ, ಗೆಜ್ಜೆ ಸಂಗಪ್ಪ ಕೆಂಚಮ್ಮ ಅನುಭವ ಮಂಟಪ ಹಾಗೂ ಸಂಪಿಗೆ ಕಟ್ಟೆ ಬಳಿ ಆಶ್ರಯ ಪಡೆದ ನಿರಾಶ್ರಿತ ಶಿಬಿರಗಳ ಫಲಾನುಭವಿಗಳಿಗೆ ಹಂಚಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಖಜಾಂಜಿ ಎಸ್. ಮನೋಹರ್, ಆಡಳಿತಾಧಿಕಾರಿ ಕೆಂಪೇಗೌಡ, ಪ್ರಾಂಶುಪಾಲ ರಚನ್ ಅಪ್ಪಣಮಯ್ಯ, ಕನ್ನಡ ಉಪನ್ಯಾಸಕರಾದ ಪಿ.ಎಸ್. ನಿತಿನ್, ದೆÉೈಹಿಕ ಹರೀಶ್, ವಿದ್ಯಾರ್ಥಿಗಳು ಜೊತೆಗಿದ್ದರು.