ಸೋಮವಾರಪೇಟೆ, ಆ.25: ಇಲ್ಲಿನ ಗೌಡ ಸಮಾಜದಲ್ಲಿ ತೆರೆಯಲಾಗಿದ್ದ ಪರಿಹಾರಕ್ಕೆ ಆಗಮಿಸಿದ ತಾಲೂಕು ತಹಶೀಲ್ದಾರ್ ಮಹೇಶ್ ಅವರಿಗೆ ಗಾಂಧಿನಗರದ ಗ್ರಾಮಸ್ಥರು ಮುತ್ತಿಗೆ ಹಾಕಿ, ಪಡಿತರ ವಸ್ತುಗಳನ್ನು ವಿತರಿಸುವಂತೆ ಆಗ್ರಹಿಸಿದ ಘಟನೆ ನಡೆಯಿತು.

ಪರಿಹಾರ ಕೇಂದ್ರಕ್ಕೆ ಹರಿದುಬಂದಿದ್ದ ಪಡಿತರವನ್ನು ಸಂತ್ರಸ್ತರಿಗೆ ಕೊಟ್ಟು ಕಳುಹಿಸುತ್ತಿದ್ದ ಸಂದರ್ಭ, ಕೇಂದ್ರಕ್ಕೆ ಆಗಮಿಸಿದ ಗ್ರಾಮಸ್ಥರು ತಮಗೂ ಪಡಿತರ ವಿತರಿಸುವಂತೆ ಒತ್ತಾಯಿಸಿದರು. ಕಳೆದ ಮೂರು ವಾರಗಳಿಂದ ಕೂಲಿ ಕೆಲಸವಿಲ್ಲದೆ ನಮ್ಮ ಬದುಕು ಅತಂತ್ರವಾಗಿದೆ ಎಂದು ತಹಶೀಲ್ದಾರ್‍ರ ಗಮನ ಸೆಳೆದರು.

ಎಲ್ಲರಿಗೂ ಗ್ರಾಮ ಪಂಚಾಯಿತಿ ಮೂಲಕ ಪಡಿತರ ವಿತರಿಸುವದಾಗಿ ತಹಶೀಲ್ದಾರ್ ಭರವಸೆ ನೀಡಿದರೂ ತೃಪ್ತರಾಗದ ಮಂದಿ, ಗದ್ದಲ ಎಬ್ಬಿಸಿದರು. ನಂತರ ಕೇಂದ್ರದಲ್ಲಿದ್ದ ಪಡಿತರವನ್ನು ಸುಮಾರು 120ಕ್ಕೂ ಅಧಿಕ ಮಂದಿಗೆ ತಲಾ 5 ಕೆ.ಜಿ. ಅಕ್ಕಿ ಮತ್ತು ಬಿಸ್ಕತ್‍ಗಳನ್ನು ನೀಡಲಾಯಿತು.