ಮಡಿಕೇರಿ, ಆ. 25: ದಕ್ಷಿಣ ಕೊಡಗಿನ ಗಡಿಭಾಗವಾದ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿರುವ ಮರೆನಾಡು ಕೊಡವ ಸಮಾಜ ಅತಿವೃಷ್ಟಿಯ ಅನಾಹುತದಿಂದ ಸಂತ್ರಸ್ತರಾಗಿರುವವರ ಸಂಕಷ್ಟಕ್ಕೆ ಸ್ಪಂದಿಸಲು ನಿರ್ಣಯ ಕೈಗೊಂಡಿದೆ. ಈ ವಿಭಾಗದಲ್ಲಿಯೂ ಈ ಬಾರಿ ಅತಿಹೆಚ್ಚು ಮಳೆಯಾಗಿದ್ದು, ಕೃಷಿ ಫಸಲುಗಳು ನೆಲಕಚ್ಚಿವೆ. ಆದರೂ ಮಡಿಕೇರಿ ವಿಭಾಗದಲ್ಲಿ ಉಂಟಾಗಿರುವ ಭಾರೀ ಅನಾಹುತಕ್ಕೆ ನೆರವಾಗಲು ಇಂದು ಸಮಾಜದ ಅಧ್ಯಕ್ಷ ಮಲ್ಲೇಂಗಡ ಕೆ. ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸಂತ್ರಸ್ತರಾದವರಿಗೆ ನೇರವಾಗಿ ಪರಿಹಾರ ಒದಗಿಸುವ ಕುರಿತು ನಿರ್ಧರಿಸಲಾಯಿತು.
ಈ ನಿಟ್ಟಿನಲ್ಲಿ ಸಮಾಜದ ವತಿಯಿಂದ ಆರ್ಥಿಕ ನೆರವು ಕ್ರೋಢೀಕರಿಸಲು ತೀರ್ಮಾನಿಸಲಾಗಿದೆ. ನೆರವು ನೀಡುವವರು ಸಮಾಜದ ಖಾತೆ ಸಂಖ್ಯೆ 14721010046 ಕೆನರಾಬ್ಯಾಂಕ್ ಬಿರುನಾಣಿ ಇಲ್ಲಿಗೆ ಸಂದಾಯ ಮಾಡುವಂತೆ ಕೋರಲಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸಮಾಜದಿಂದ ನಡೆಸುತ್ತಿದ್ದ ಕೈಲುಮುಹೂರ್ತ ಒತ್ತೊರ್ಮೆ ಕೂಟವನ್ನು ನಡೆಸದಂತೆಯೂ ತೀರ್ಮಾನಿಸಲಾಗಿದೆ.